ಲಿಮಾ, ಆ. 02 (DaijiworldNews/TA): ದಕ್ಷಿಣ ಅಮೇರಿಕಾದ ಪೆರು ದೇಶದ ವಿಶ್ವವಿಖ್ಯಾತ ಯುನೆಸ್ಕೋ ವಿಶ್ವ ಪರಂಪರೆ ತಾಣವಾದ ನಾಜ್ಕಾ ಲೈನ್ಸ್ ವೀಕ್ಷಣೆಗೆ ತೆರಳಿದ್ದ ಪ್ರವಾಸಿ ವಿಮಾನವೊಂದು ಪತನಗೊಂಡ ಪರಿಣಾಮ, ವಿಮಾನದಲ್ಲಿದ್ದ 11 ವಿದೇಶಿ ಪ್ರವಾಸಿಗರು ಹಾಗೂ ಇಬ್ಬರು ಸಿಬ್ಬಂದಿ ಸೇರಿ ಒಟ್ಟು 13 ಮಂದಿ ಸಾವನ್ನಪ್ಪಿದ್ದಾರೆ. ಈ ಮಾಹಿತಿಯನ್ನು ಪೆರುವಿನ ಸಾರಿಗೆ ಮತ್ತು ಸಂವಹನ ಸಚಿವಾಲಯ ಅಧಿಕೃತವಾಗಿ ದೃಢಪಡಿಸಿದೆ.

‘ಏರೋಡಿಯಾನಾ’ ವಿಮಾನಯಾನ ಸಂಸ್ಥೆಗೆ ಸೇರಿದ ಸೆಸ್ನಾ ಕ್ಯಾರವಾನ್ C-208 ಮಾದರಿಯ ಸಣ್ಣ ಪ್ರವಾಸಿ ವಿಮಾನವು ನಾಜ್ಕಾ ಏರ್ಡ್ರೋಮ್ನಿಂದ ಹಾರಾಟ ಆರಂಭಿಸಿತ್ತು. ಮಧ್ಯಾಹ್ನ ಸುಮಾರು 1 ಗಂಟೆ ವೇಳೆಗೆ ಪ್ಯೂಬ್ಲೊ ನ್ಯೂಯೆವೊ ಜಿಲ್ಲೆಯ ಸೊಕೊಸ್ ಪ್ರದೇಶದ ಮೇಲೆ ಹಾರುತ್ತಿದ್ದಾಗ, ಸಿಬ್ಬಂದಿ ನಿಯಂತ್ರಣ ಕೊಠಡಿಗೆ ತುರ್ತು ಪರಿಸ್ಥಿತಿಯ ಸಂದೇಶ ರವಾನಿಸಿದ್ದರು. ಆದರೆ ಕೆಲವೇ ಕ್ಷಣಗಳಲ್ಲಿ ವಿಮಾನದೊಂದಿಗೆ ಸಂಪರ್ಕ ಸಂಪೂರ್ಣ ಕಡಿದುಬಿದ್ದು, ಬಳಿಕ ಅದು ನೆಲಕ್ಕೆ ಅಪ್ಪಳಿಸಿತು.
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆಯೇ ರಾಷ್ಟ್ರೀಯ ಪೊಲೀಸ್, ನಾಗರಿಕ ವಿಮಾನಯಾನ ನಿರ್ದೇಶನಾಲಯ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಆದರೆ ವಿಮಾನ ಸಂಪೂರ್ಣ ನಜ್ಜುಗುಜ್ಜಾಗಿದ್ದರಿಂದ ಯಾರೊಬ್ಬರೂ ಬದುಕುಳಿಯಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾಯುಯಾನ ಅಪಘಾತ ತನಿಖಾ ಆಯೋಗವು ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದೆ. ವಿಮಾನ ಪತನಕ್ಕೆ ತಾಂತ್ರಿಕ ದೋಷ ಕಾರಣವೇ ಅಥವಾ ಪ್ರತಿಕೂಲ ಹವಾಮಾನವೇ ಕಾರಣವೇ ಎಂಬುದನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.
ಏನಿದು ನಾಜ್ಕಾ ಲೈನ್ಸ್? : ಪೆರುವಿನ ದಕ್ಷಿಣ ಮರುಭೂಮಿ ಪ್ರದೇಶದಲ್ಲಿರುವ ನಾಜ್ಕಾ ಲೈನ್ಸ್ ಕ್ರಿ.ಪೂ. 500ರಿಂದ ಕ್ರಿ.ಶ. 500ರ ಅವಧಿಯಲ್ಲಿ ನಿರ್ಮಿಸಲಾದ ಬೃಹತ್ ಜಿಯೋಗ್ಲಿಫ್ಗಳಾಗಿವೆ. ಪ್ರಾಣಿಗಳು, ಸಸ್ಯಗಳು, ಜ್ಯಾಮಿತೀಯ ಆಕಾರಗಳು ಹಾಗೂ ವಿವಿಧ ಕಲಾತ್ಮಕ ವಿನ್ಯಾಸಗಳನ್ನು ಒಳಗೊಂಡಿರುವ ಈ ರೇಖಾಚಿತ್ರಗಳು ನೆಲಮಟ್ಟದಿಂದ ಸ್ಪಷ್ಟವಾಗಿ ಕಾಣುವುದಿಲ್ಲ. ಸಣ್ಣ ವಿಮಾನಗಳಲ್ಲಿ ಆಕಾಶಮಾರ್ಗದಿಂದ ವೀಕ್ಷಿಸಿದಾಗ ಮಾತ್ರ ಅವುಗಳ ಸಂಪೂರ್ಣ ವಿನ್ಯಾಸ ಗೋಚರಿಸುತ್ತದೆ. ಈ ಕಾರಣದಿಂದ ಪ್ರತಿದಿನ ನೂರಾರು ವಿದೇಶಿ ಪ್ರವಾಸಿಗರು ನಾಜ್ಕಾ ಲೈನ್ಸ್ ವೀಕ್ಷಣೆಗೆ ವಿಶೇಷ ಪ್ರವಾಸಿ ವಿಮಾನಗಳಲ್ಲಿ ಹಾರಾಟ ನಡೆಸುತ್ತಾರೆ. ಈ ಹಿಂದೆ ಸಹ ಇದೇ ಪ್ರದೇಶದಲ್ಲಿ ಪ್ರವಾಸಿ ವಿಮಾನ ದುರಂತಗಳು ಸಂಭವಿಸಿದ್ದ ಹಿನ್ನೆಲೆ, ಸುರಕ್ಷತಾ ಕ್ರಮಗಳನ್ನು ಮತ್ತಷ್ಟು ಕಠಿಣಗೊಳಿಸಲು ಪೆರು ಸರ್ಕಾರ ಮುಂದಾಗಿದೆ.