ಮೆಕ್ಸಿಕೋ, ಜು. 18 (DaijiworldNews/AA): ದಕ್ಷಿಣ ಮೆಕ್ಸಿಕೋದಲ್ಲಿ ಶುಕ್ರವಾರ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಭೂಕಂಪದ ಬೆನ್ನಲ್ಲೇ ಸುನಾಮಿ ಎಚ್ಚರಿಕೆ ನೀಡಲಾಗಿದೆ.

ಸಮುದ್ರ ತೀರದ ಪ್ರದೇಶಗಳಲ್ಲಿ ಭಾರಿ ಎತ್ತರದ ಸುನಾಮಿ ಅಲೆಗಳು ಅಪ್ಪಳಿಸುವ ಭೀತಿ ಹಿನ್ನೆಲೆ, ಅಧಿಕಾರಿಗಳು ಸುನಾಮಿ ಎಚ್ಚರಿಕೆ ನೀಡಿದ್ದರು. ದಕ್ಷಿಣ ಮೆಕ್ಸಿಕೋದ ಪೆಸಿಫಿಕ್ ಕರಾವಳಿ ಪ್ರದೇಶದಲ್ಲಿ ಈ ಭೂಕಂಪ ದಾಖಲಾಗಿದೆ.
ಭೂಕಂಪದ ತೀವ್ರತೆಯು 7ಕ್ಕಿಂತ ಹೆಚ್ಚಿರುವುದರಿಂದ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು ಸಮುದ್ರ ತೀರದ ಪ್ರದೇಶಗಳಿಗೆ ತುರ್ತು ಸೂಚನೆ ನೀಡಿದೆ. ಭೂಕಂಪದ ಕೇಂದ್ರಬಿಂದುವಿನಿಂದ ಸುಮಾರು 1,000 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಕರಾವಳಿ ತೀರಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ.
ಮೆಕ್ಸಿಕೋದಲ್ಲಿ ಭೂಕಂಪ ಸಂಭವಿಸಿದ ಹಿನ್ನೆಲೆ ನೆರೆಯ ದೇಶಗಳಾದ ಗ್ವಾಟೆಮಾಲಾ ಮತ್ತು ಎಲ್ ಸಾಲ್ವಡಾರ್ನಲ್ಲಿಯೂ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ.