ಕ್ಯಾರಕಾಸ್, ಜೂ. 25 (DaijiworldNews/TA): ವೆನೆಜುವೆಲಾವನ್ನು ಕೇವಲ ಒಂದು ನಿಮಿಷದ ಅಂತರದಲ್ಲಿ ಸಂಭವಿಸಿದ ಎರಡು ಪ್ರಬಲ ಭೂಕಂಪಗಳು ತತ್ತರಗೊಳಿಸಿವೆ. 7.2 ಮತ್ತು 7.5 ತೀವ್ರತೆಯ ಭೂಕಂಪಗಳು ರಾಜಧಾನಿ ಕ್ಯಾರಕಾಸ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರೀ ಹಾನಿ ಉಂಟುಮಾಡಿದ್ದು, ಕಟ್ಟಡಗಳು ಕುಸಿದುಬಿದ್ದಿವೆ. ಇದು ಕಳೆದ ಶತಮಾನಕ್ಕೂ ಅಧಿಕ ಅವಧಿಯಲ್ಲಿ ದೇಶವನ್ನು ಅಪ್ಪಳಿಸಿದ ಅತ್ಯಂತ ಪ್ರಬಲ ಭೂಕಂಪಗಳಲ್ಲಿ ಒಂದಾಗಿದೆ ಎಂದು ವರದಿಗಳು ತಿಳಿಸಿವೆ.

ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಪ್ರಕಾರ, ಮೊದಲ ಭೂಕಂಪವು 7.2 ತೀವ್ರತೆಯದ್ದಾಗಿದ್ದು, ಮೊರೊನ್ ಸಮೀಪ ಸುಮಾರು 22 ಕಿ.ಮೀ ಆಳದಲ್ಲಿ ಸಂಭವಿಸಿದೆ. ಅದರ ಕೇವಲ ಒಂದು ನಿಮಿಷದೊಳಗೆ 7.5 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದ್ದು, ಅದರ ಕೇಂದ್ರಬಿಂದು ಸುಮಾರು 10 ಕಿ.ಮೀ ಆಳದಲ್ಲಿತ್ತು. ಆಳ ಕಡಿಮೆ ಇದ್ದ ಕಾರಣ ಕಂಪನದ ಪರಿಣಾಮ ಹೆಚ್ಚು ವಿನಾಶಕಾರಿ ಆಗಿದೆ.
ಭೂಕಂಪದ ತೀವ್ರತೆಗೆ ರಾಜಧಾನಿ ಕ್ಯಾರಕಾಸ್ನ ಹಲವು ಬಹುಮಹಡಿ ಕಟ್ಟಡಗಳು ಹಾನಿಗೊಳಗಾಗಿದ್ದು, ಕೆಲವು ಕಟ್ಟಡಗಳು ಸಂಪೂರ್ಣ ಕುಸಿದುಬಿದ್ದಿವೆ. ವಿದ್ಯುತ್ ಮತ್ತು ಸಂವಹನ ಸೇವೆಗಳಲ್ಲಿಯೂ ವ್ಯತ್ಯಯ ಉಂಟಾಗಿದ್ದು, ಜನರು ಭಯಭೀತರಾಗಿ ಮನೆಗಳಿಂದ ಹೊರಬಂದು ಬೀದಿಗಳಲ್ಲಿ ಆಶ್ರಯ ಪಡೆದಿದ್ದಾರೆ.
ವೆನೆಜುವೆಲಾ ಸರ್ಕಾರದ ಪ್ರಾಥಮಿಕ ಮಾಹಿತಿಯ ಪ್ರಕಾರ ಕನಿಷ್ಠ 32 ಮಂದಿ ಮೃತಪಟ್ಟಿದ್ದು, 700ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಆದರೆ ಅವಶೇಷಗಳ ಅಡಿಯಲ್ಲಿ ಇನ್ನೂ ಹಲವರು ಸಿಲುಕಿರುವ ಸಾಧ್ಯತೆ ಇರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಭೀತಿ ವ್ಯಕ್ತವಾಗಿದೆ.
ಘಟನೆಯ ಬೆನ್ನಲ್ಲೇ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ರಕ್ಷಣಾ ತಂಡಗಳು ಅವಶೇಷಗಳಡಿ ಸಿಲುಕಿರುವವರನ್ನು ಹೊರತೆಗೆಯುವ ಕಾರ್ಯದಲ್ಲಿ ನಿರತವಾಗಿದ್ದು, ಅಂತರರಾಷ್ಟ್ರೀಯ ನೆರವು ಪಡೆಯುವ ಪ್ರಯತ್ನಗಳೂ ಆರಂಭಗೊಂಡಿವೆ. ಪ್ರಮುಖ ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.