ಜರ್ಮನಿ, ಮೇ. 31 (DaijiworldNews/TA) : ಭಾರತ ಮತ್ತು ಜರ್ಮನಿ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಜರ್ಮನಿಯ ಭಾರತೀಯ ಸಮುದಾಯ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಜರ್ಮನಿಯ ಸ್ಟಟ್ಗಾರ್ಟ್ನಲ್ಲಿ ನೆಲೆಸಿರುವ ಭಾರತೀಯ ಮೂಲದ ಆವಿಷ್ಕಾರಕಿ ಹಾಗೂ ನೈತಿಕ ಎಐ ತಜ್ಞೆ ಚಿತ್ರಾ ವಿಶ್ವನಾಥ್ ಅವರ ನೇತೃತ್ವದಲ್ಲಿ ‘ಇಂಡಿಯಾ ಫೆಡರೇಶನ್ ಆಫ್ ಜರ್ಮನಿ’ (IFG) ಸಂಸ್ಥೆ ಅಧಿಕೃತವಾಗಿ ಆರಂಭವಾಗಿದೆ.

ಜರ್ಮನಿಯ 16 ಫೆಡರಲ್ ರಾಜ್ಯಗಳಲ್ಲಿರುವ 100ಕ್ಕೂ ಹೆಚ್ಚು ಭಾರತೀಯ ಸಂಘಟನೆಗಳನ್ನು ಒಂದೇ ವೇದಿಕೆಯಡಿ ತರಲು ಈ ಒಕ್ಕೂಟವನ್ನು ಸ್ಥಾಪಿಸಲಾಗಿದೆ. ಜರ್ಮನಿಯಲ್ಲಿ ಪ್ರಸ್ತುತ 3 ಲಕ್ಷಕ್ಕೂ ಹೆಚ್ಚು ಭಾರತೀಯ ಮೂಲದ ಜನರು ವಾಸಿಸುತ್ತಿದ್ದು, ದೇಶದ ಆರ್ಥಿಕತೆಗೆ ವಾರ್ಷಿಕ 15 ಬಿಲಿಯನ್ ಯುರೋಗಳಿಗಿಂತ ಹೆಚ್ಚು ಕೊಡುಗೆ ನೀಡುತ್ತಿದ್ದಾರೆ. ಈ ಸಮುದಾಯದ ಒಗ್ಗಟ್ಟಿನ ಧ್ವನಿಯಾಗಿ IFG ಕಾರ್ಯನಿರ್ವಹಿಸಲಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಜರ್ಮನಿಯ ಚಾನ್ಸಲರ್ ಫ್ರೆಡ್ರಿಕ್ ಮೆರ್ಜ್ ಅವರ ನಾಯಕತ್ವದಲ್ಲಿ ಉಭಯ ದೇಶಗಳ ನಡುವೆ ಆರ್ಥಿಕ ಮತ್ತು ಕಾರ್ಯತಂತ್ರದ ಸಹಕಾರ ವಿಸ್ತರಿಸುತ್ತಿರುವ ಸಮಯದಲ್ಲಿ, ಈ ಹೊಸ ಒಕ್ಕೂಟವು ಸಾಂಸ್ಕೃತಿಕ, ಸಾಮಾಜಿಕ ಮತ್ತು ಆರ್ಥಿಕ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆ ಮೂಡಿಸಿದೆ.
ಈ ಸಾಧನೆಯ ಕುರಿತು ತಮ್ಮ ಲಿಂಕ್ಡ್ಇನ್ ಖಾತೆಯಲ್ಲಿ ಹಂಚಿಕೊಂಡಿರುವ ಚಿತ್ರಾ ವಿಶ್ವನಾಥ್, 28 ವರ್ಷಗಳ ಹಿಂದೆ ವಿದ್ಯಾರ್ಥಿನಿಯಾಗಿ ಜರ್ಮನಿಗೆ ಕಾಲಿಟ್ಟ ದಿನಗಳನ್ನು ಸ್ಮರಿಸಿದ್ದಾರೆ. ಅಂತರರಾಷ್ಟ್ರೀಯ ಮಾಸ್ಟರ್ಸ್ ಕಾರ್ಯಕ್ರಮದ ಮೊದಲ ಬ್ಯಾಚ್ನಲ್ಲಿ ವಿದ್ಯಾಭ್ಯಾಸ ಆರಂಭಿಸಿದ್ದ ಅವರು, ಬಳಿಕ ಜರ್ಮನಿಯ ಪ್ರಮುಖ ತಂತ್ರಜ್ಞಾನ ಸಂಸ್ಥೆ Bosch ನಲ್ಲಿ 25 ವರ್ಷಗಳ ಯಶಸ್ವಿ ವೃತ್ತಿಜೀವನವನ್ನು ಪೂರೈಸಿದ್ದಾರೆ.
ತಮ್ಮ ಪತಿ ಮಂಜುನಾಥ್ ಗುಬ್ಬಿ ಅವರೊಂದಿಗೆ ಕಳೆದ 27 ವರ್ಷಗಳಿಂದ ಜರ್ಮನಿಯಲ್ಲಿ ನೆಲೆಸಿರುವ ಚಿತ್ರಾ, ಕುಟುಂಬ ಜೀವನದ ಜೊತೆಗೆ ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಉಳಿಸಿಕೊಂಡು ಬಂದಿದ್ದಾರೆ. ಮಾರ್ಚ್ ತಿಂಗಳಿಂದ ಈ ಹೊಸ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಚಿತ್ರಾ ವಿಶ್ವನಾಥ್, ಸಿದ್ಧಾರ್ಥ್ ಮುದ್ಗಲ್ ನೇತೃತ್ವದ ತಂಡದೊಂದಿಗೆ ಜರ್ಮನಿಯಲ್ಲಿರುವ ಭಾರತೀಯರನ್ನು ಒಗ್ಗೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
"ಇದು ಕೇವಲ ಒಂದು ಸಂಸ್ಥೆಯಲ್ಲ, ಇದು ಒಂದು ಚಳುವಳಿ. ಭವಿಷ್ಯವು ಸಹಭಾಗಿತ್ವ ಮತ್ತು ಜಾಗತಿಕ ಸಂಪರ್ಕದ ಮೇಲೆ ನಿಂತಿದೆ. ಅದರಲ್ಲಿ ಅನಿವಾಸಿ ಭಾರತೀಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ," ಎಂದು ಚಿತ್ರಾ ವಿಶ್ವನಾಥ್ ಅಭಿಪ್ರಾಯಪಟ್ಟಿದ್ದಾರೆ.
‘ಇಂಡಿಯಾ ಫೆಡರೇಶನ್ ಆಫ್ ಜರ್ಮನಿ’ ಸ್ಥಾಪನೆಯು ಜರ್ಮನಿಯಲ್ಲಿರುವ ಭಾರತೀಯ ಸಮುದಾಯಕ್ಕೆ ಹೊಸ ಗುರುತನ್ನು ನೀಡುವುದರ ಜೊತೆಗೆ, ಭಾರತ-ಜರ್ಮನಿ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.