ಢಾಕಾ, ಮೇ. 20 (DaijiworldNews/AA): ಭಾರತದ ಅಧಿಕಾರಿಯೊಬ್ಬರು ಬಾಂಗ್ಲಾದೇಶದ ಚಟ್ಟೋಗ್ರಾಮ್ನಲ್ಲಿರುವ ಭಾರತದ ಸಹಾಯಕ ಹೈಕಮಿಷನ್ ಕಚೇರಿ ಆವರಣದಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದ್ದು, ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ನರೇಂದ್ರ ಧಾರ್(35) ಎಂಬ ಭಾರತೀಯ ಅಧಿಕಾರಿ ಬಾಂಗ್ಲಾದೇಶದ ಸರ್ಕಾರಿ ಕಚೇರಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ನರೇಂದ್ರ ಧಾರ್ ಅವರು ಹರ್ಯಾಣ ಮೂಲದವರಾಗಿದ್ದು, ಚಟ್ಟೋಗ್ರಾಮಿನ ಖುಲ್ಶಿ ಪ್ರದೇಶದಲ್ಲಿರುವ ಭಾರತೀಯ ಸಹಾಯಕ ಹೈಕಮಿಷನ್ನಲ್ಲಿ ಪ್ರೋಟೋಕಾಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಮಂಗಳವಾರ ಬೆಳಿಗ್ಗೆ ತಮ್ಮ ಕೊಠಡಿಯೊಳಗಿನಿಂದ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆ ಮಿಷನ್ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಅವರ ಮೃತದೇಹವನ್ನು ಕಚೇರಿ ಆವರಣದಿಂದ ಹೊರತೆಗೆದು ಚಟ್ಟೋಗ್ರಾಮ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಯಿತು ಎಂದು ಚಟ್ಟೋಗ್ರಾಮ್ ಪೊಲೀಸರು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ಬಳಿಕ ಅಸಹಜ ಸಾವು ಪ್ರಕರಣ ದಾಖಲಿಸಿ, ಸಂಪೂರ್ಣ ತನಿಖೆ ಆರಂಭಿಸಲಾಗುತ್ತದೆ. ಇಲ್ಲಿಯವರೆಗೆ ಸಾವಿನ ನಿಖರ ಕಾರಣವನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಾಂಗ್ಲಾದೇಶದಲ್ಲಿ ಭಾರತದ ಹೈಕಮಿಷನ್ ಅಧಿಕಾರಿಗಳು ಮೃತ ಅಧಿಕಾರಿಯ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದಾರೆ. ಮರಣೋತ್ತರ ಪರೀಕ್ಷೆಯ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಮೃತದೇಹವನ್ನು ಭಾರತೀಯ ಮಿಷನ್ಗೆ ಹಸ್ತಾಂತರಿಸಲಾಗುತ್ತದೆ ಎಂದು ಸರ್ಕಾರಿ ಮೂಲಗಳಿಂದ ತಿಳಿದುಬಂದಿದೆ.