ವಾಷಿಂಗ್ಟನ್, ಮೇ. 19 (DaijiworldNews/AA): ಗಂಭೀರ ಮಾತುಕತೆಗಳು ನಡೆಯುತ್ತಿರುವುದರಿಂದ ಇಂದು ಮಂಗಳವಾರಕ್ಕೆ ಯೋಜಿಸಲಾಗಿದ್ದ ಇರಾನ್ ಮೇಲಿನ ಸೈನಿಕ ದಾಳಿಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ಒಪ್ಪಂದಕ್ಕೆ ಬರದಿದ್ದರೆ ಯುದ್ಧ ಮತ್ತೆ ಆರಂಭವಾಗಬಹುದು ಎಂದು ಅವರು ಈ ಮೊದಲು ಎಚ್ಚರಿಕೆ ನೀಡಿದ್ದರು. ಅಸ್ಥಿರ ಯುದ್ಧ ವಿರಾಮದ ಬಳಿಕ ಇರಾನ್ಗೆ ಒಪ್ಪಂದಕ್ಕೆ ಬರಲು ಸಮಯ ಕಡಿಮೆಯಾಗುತ್ತಿದೆ ಎಂದು ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಡೊನಾಲ್ಡ್ ಟ್ರಂಪ್ ಪೋಸ್ಟ್ ಮಾಡಿದ್ದರು.
ಯೋಜಿತ ದಾಳಿಯ ಕುರಿತು ಡೊನಾಲ್ಡ್ ಟ್ರಂಪ್ ಹೆಚ್ಚಿನ ವಿವರಗಳನ್ನು ನೀಡಲಿಲ್ಲ. 'ಸ್ವೀಕಾರಾರ್ಹ ಒಪ್ಪಂದ ಸಾಧ್ಯವಾಗದಿದ್ದರೆ ಕ್ಷಣಾರ್ಧದಲ್ಲೇ ಇರಾನ್ ಮೇಲೆ ಸಂಪೂರ್ಣ ಮತ್ತು ಭಾರೀ ಮಟ್ಟದ ದಾಳಿ ನಡೆಸಲು ಸಿದ್ಧರಾಗಿರಿ ಎಂದು ಅಮೆರಿಕ ಸೇನೆಗೆ ಸೂಚನೆ ನೀಡಿರುವುದಾಗಿ' ಅವರು ತಿಳಿಸಿದ್ದರು.
ಮೇ 19ರಂದು ದಾಳಿ ನಡೆಸುವ ಯೋಜನೆ ಇದ್ದುದನ್ನು ಡೊನಾಲ್ಡ್ ಟ್ರಂಪ್ ಈ ಮೊದಲು ಬಹಿರಂಗಪಡಿಸಿರಲಿಲ್ಲ. ಆದರೆ ಕಳೆದ ವಾರಾಂತ್ಯದಲ್ಲಿ, ಇರಾನ್ಗೆ ಸಮಯ ವೇಗವಾಗಿ ಮುಗಿಯುತ್ತಿದೆ. ಅವರು ಬೇಗ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಅವರಲ್ಲಿ ಏನೂ ಉಳಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು.