ಸ್ಟಾಕ್ಹೋಮ್, ಮೇ. 18 (DaijiworldNews/TA): ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಸ್ವೀಡನ್ ಪ್ರವಾಸವು ಭಾರತ ಮತ್ತು ಸ್ವೀಡನ್ ನಡುವಿನ ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ಚೈತನ್ಯ ತುಂಬಿದ್ದು, ರಾಜತಾಂತ್ರಿಕ ಹಾಗೂ ಆರ್ಥಿಕ ಸಹಕಾರಕ್ಕೆ ಮತ್ತಷ್ಟು ಬಲ ನೀಡಿದೆ.

ಈ ಭೇಟಿಯು ಅತ್ಯಂತ ಯಶಸ್ವಿಯಾಗಿದ್ದು, ಉಭಯ ದೇಶಗಳ ಸಂಬಂಧವನ್ನು ‘ಸ್ಟ್ರಾಟೆಜಿಕ್ ಪಾರ್ಟ್ನರ್ಶಿಪ್’ ಮಟ್ಟಕ್ಕೆ ಏರಿಸಲಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಪ್ರವಾಸದ ವೇಳೆ ತಂತ್ರಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿ ಜಂಟಿ ಸಂಶೋಧನೆಗೆ ಚಾಲನೆ ನೀಡಲಾಗಿದ್ದು, ಭಾರತ-ಸ್ವೀಡನ್ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (AI) ಕಾರಿಡಾರ್ ಅನ್ನು ಅಧಿಕೃತವಾಗಿ ಪ್ರಾರಂಭಿಸಲಾಗಿದೆ.
ಮುಂದಿನ ಐದು ವರ್ಷಗಳಲ್ಲಿ ಭಾರತ ಮತ್ತು ಸ್ವೀಡನ್ ನಡುವಿನ ದ್ವಿಪಕ್ಷೀಯ ವ್ಯಾಪಾರವನ್ನು ದುಪ್ಪಟ್ಟುಗೊಳಿಸುವ ಮಹತ್ವಾಕಾಂಕ್ಷಿ ಗುರಿಯನ್ನು ಎರಡೂ ದೇಶಗಳು ಹೊಂದಿವೆ. ಸ್ವೀಡನ್ ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್, ಅಲ್ಲಿನ ಸರ್ಕಾರ ಹಾಗೂ ಜನತೆ ತೋರಿದ ಆತ್ಮೀಯ ಆತಿಥ್ಯ ಮತ್ತು ಸ್ನೇಹಕ್ಕೆ ಪ್ರಧಾನಿ ಮೋದಿ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಒಪ್ಪಂದಗಳು ಭವಿಷ್ಯದಲ್ಲಿ ಉಭಯ ದೇಶಗಳ ತಂತ್ರಜ್ಞಾನ, ಆರ್ಥಿಕತೆ ಮತ್ತು ಹೂಡಿಕೆ ಕ್ಷೇತ್ರಗಳ ಅಭಿವೃದ್ಧಿಗೆ ಹೊಸ ದಾರಿದೀಪವಾಗಲಿವೆ ಎಂದು ವಿಶ್ಲೇಷಿಸಲಾಗಿದೆ.