ಮಾಸ್ಕೋ, ಮೇ. 17 (DaijiworldNews/AA): ಮಾಸ್ಕೋ ಸೇರಿದಂತೆ ರಷ್ಯಾದ ಅನೇಕ ಭಾಗಗಳನ್ನು ಗುರಿಯಾಗಿಸಿಕೊಂಡು ಉಕ್ರೇನ್ ಶನಿವಾರ ರಾತ್ರೋರಾತ್ರಿ ಡ್ರೋನ್ ದಾಳಿ ನಡೆಸಿದೆ. ಈ ದಾಳಿಯಲ್ಲಿ 500ಕ್ಕೂ ಹೆಚ್ಚು ಡ್ರೋನ್ಗಳನ್ನು ಬಳಸಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

'ಕಳೆದ ಒಂದು ವರ್ಷದಿಂದ ಉಕ್ರೇನ್ ರಷ್ಯಾದ ಮೇಲೆ ಮಾಡಿರುವ ಅತಿ ದೊಡ್ಡ ದಾಳಿ ಇದಾಗಿದೆ. ರಾತ್ರಿ ನಡೆದ ಡ್ರೋನ್ ದಾಳಿಯಲ್ಲಿ 556 ಉಕ್ರೇನಿನ ಡ್ರೋನ್ಗಳು 12ಕ್ಕಿಂತಲೂ ಹೆಚ್ಚು ತಮ್ಮ ವಾಯು ರಕ್ಷಣಾ ನೆಲೆಗಳನ್ನು ನಾಶಪಡಿಸಿವೆ. ಇದರಲ್ಲಿ ನಾಲ್ಕು ಜನ ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾಗಿವೆ. ಪಶ್ಚಿಮ ರಷ್ಯಾದಾದ್ಯಂತ ವಿವಿಧ ಪ್ರದೇಶದ ವಸತಿ ಕಟ್ಟಡಗಳಿಗೆ ಹಾನಿಯುಂಟಾಗಿದೆ' ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.
ಈ ಕುರಿತು ಮಾಸ್ಕೋದ ಪ್ರಾದೇಶಿಕ ಗವರ್ನರ್ ಟೆಲಿಗ್ರಾಮ್ನಲ್ಲಿ ಮಾಹಿತಿ ಹಂಚಿಕೊಂಡಿದ್ದು, 'ಖಾಸಗಿ ಮನೆಯೊಂದಕ್ಕೆ ಡ್ರೋನ್ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಮಹಿಳೆ ಸಾವನ್ನಪ್ಪಿದ್ದಾರೆ. ಈ ವೇಳೆ ಇನ್ನೊಬ್ಬ ವ್ಯಕ್ತಿ ಅವಶೇಷಗಳಡಿಯಲ್ಲಿ ಸಿಲುಕಿದ್ದಾನೆ. ಮುಂಜಾನೆ 3 ಗಂಟೆಯಿಂದ ನಮ್ಮ ರಕ್ಷಣಾ ಪಡೆಗಳು ಉಕ್ರೇನಿನ ಡ್ರೋನ್ಗಳನ್ನು ಹಿಮ್ಮೆಟ್ಟಿಸುತ್ತಿವೆ. ಗುಂಡಿನ ದಾಳಿಯ ವೇಳೆ ಅನೇಕ ಮೂಲ ಸೌಕರ್ಯಗಳನ್ನು ಗುರಿಯಾಗಿಸಿಕೊಂಡಿದ್ದಾರೆ' ಎಂದು ತಿಳಿಸಿದ್ದಾರೆ.
'ಮಾಸ್ಕೋದಲ್ಲಿಯೇ ವಾಯು ರಕ್ಷಣಾ ವ್ಯವಸ್ಥೆಗಳು ಕನಿಷ್ಠ 74 ಡ್ರೋನ್ಗಳನ್ನು ತಡೆದಿವೆ. ಇದು ಸಂಘರ್ಷದ ಸಮಯದಲ್ಲಿ ದೇಶ ಎದುರಿಸಿದ ಅತ್ಯಂತ ಭೀಕರ ಡ್ರೋನ್ ದಾಳಿಗಳಲ್ಲಿ ಒಂದಾಗಿದೆ. ವಿವಿಧ ಪ್ರದೇಶಗಳಲ್ಲಿ ತಡೆಹಿಡಿಯಲಾದ ಡ್ರೋನ್ಗಳ ಅವಶೇಷಗಳು ಕೆಳಗೆ ಬಿದ್ದ ಕಾರಣ 12 ಜನ ಗಾಯಗೊಂಡಿದ್ದಾರೆ. ಇನ್ನೂ ಹಲವೆಡೆ ಸಣ್ಣ-ಪುಟ್ಟ ಹಾನಿಯಾಗಿದೆ' ಎಂದು ಮೇಯರ್ ಸೆರ್ಗೆಯನ್ ಸೊಬ್ಯಾನಿನ್ ತಮ್ಮ ಟೆಲಿಗ್ರಾಮ್ನಲ್ಲಿ ತಿಳಿಸಿದ್ದಾರೆ
ಉಕ್ರೇನ್ ರಷ್ಯಾದ ಮೇಲಿನ ತನ್ನ ಡ್ರೋನ್ ಕಾರ್ಯಾಚರಣೆಯನ್ನು ಪದೇ ಪದೇ ಸಮರ್ಥಿಸಿಕೊಳ್ಳುತ್ತಿದೆ. ಅವು ಮಿಲಿಟರಿ ಸೌಕರ್ಯ, ಲಾಜಿಸ್ಟಿಕ್ ಕೇಂದ್ರಗಳು, ಮಾಸ್ಕೋದ ಯುದ್ಧದ ಪ್ರಯತ್ನವನ್ನು ಬೆಂಬಲಿಸುವ ಇಂಧನ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡಿವೆ. ಉಕ್ರೇನ್ ಉದ್ದೇಶಪೂರ್ವಕವಾಗಿ ರಷ್ಯಾದ ನಾಗರೀಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವ ಮೂಲಕ ಭೀತಿ ಹುಟ್ಟಿಸುತ್ತಿದೆ ಎಂದು ರಷ್ಯಾ ಆರೋಪ ಮಾಡಿದೆ.