ನೆದರ್ಲ್ಯಾಂಡ್ಸ್, ಮೇ. 17 (DaijiworldNews/TA) : ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡುವಂತಹ ಐತಿಹಾಸಿಕ ಕ್ಷಣಕ್ಕೆ ನೆದರ್ಲ್ಯಾಂಡ್ಸ್ ಸಾಕ್ಷಿಯಾಗಿದೆ. 11ನೇ ಶತಮಾನಕ್ಕೆ ಸೇರಿದ ಚೋಳ ಸಾಮ್ರಾಜ್ಯದ ಅಮೂಲ್ಯ ತಾಮ್ರದ ಶಾಸನಗಳು ಸುದೀರ್ಘ ವರ್ಷಗಳ ಬಳಿಕ ಭಾರತಕ್ಕೆ ಮರಳಲಿವೆ.

ನೆದರ್ಲ್ಯಾಂಡ್ಸ್ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಡಚ್ ಅಧಿಕಾರಿಗಳ ಸಮ್ಮುಖದಲ್ಲಿ ಈ ಐತಿಹಾಸಿಕ ಹಸ್ತಾಂತರ ಪ್ರಕ್ರಿಯೆ ನೆರವೇರಿತು. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, “ಇದು ಪ್ರತಿಯೊಬ್ಬ ಭಾರತೀಯನಿಗೂ ಸಂತಸದ ಹಾಗೂ ಹೆಮ್ಮೆಯ ಕ್ಷಣ” ಎಂದು ಬರೆದುಕೊಂಡಿದ್ದಾರೆ.
ಚೋಳರ ಕಾಲದ ಈ ಅಪರೂಪದ ಸಂಗ್ರಹದಲ್ಲಿ ಒಟ್ಟು 21 ದೊಡ್ಡ ತಾಮ್ರದ ಫಲಕಗಳು ಹಾಗೂ 3 ಸಣ್ಣ ಫಲಕಗಳಿವೆ. ಇವುಗಳನ್ನು ಕಂಚಿನ ಉಂಗುರದ ಮೂಲಕ ಜೋಡಿಸಲಾಗಿದ್ದು, ಅದರ ಮೇಲೆ ಚೋಳ ರಾಜವಂಶದ ರಾಜಮುದ್ರೆ ಅಚ್ಚಳಿಯಾಗಿದೆ.
ಈ ಶಾಸನಗಳ ಬಹುತೇಕ ಬರಹಗಳು ತಮಿಳು ಭಾಷೆಯಲ್ಲಿ ಕೆತ್ತಲ್ಪಟ್ಟಿದ್ದು, ಕೆಲವು ಭಾಗಗಳಲ್ಲಿ ಸಂಸ್ಕೃತ ಭಾಷೆಯ ಬಳಕೆಯೂ ಕಂಡುಬರುತ್ತದೆ. ಚೋಳ ಸಾಮ್ರಾಜ್ಯದ ವೈಭವ, ಆಡಳಿತ ವ್ಯವಸ್ಥೆ ಹಾಗೂ ಸಮುದ್ರಾಧಿಪತ್ಯದ ನೌಕಾ ಪರಾಕ್ರಮವನ್ನು ಈ ಶಾಸನಗಳು ದಾಖಲಿಸಿವೆ. ಇತಿಹಾಸಕಾರರ ಪ್ರಕಾರ, ಚೋಳ ಸಾಮ್ರಾಜ್ಯದ ಮಹಾನ್ ರಾಜ ಚೋಳ ರಾಜ I ನೀಡಿದ್ದ ಭರವಸೆಯನ್ನು, ಅವರ ಪುತ್ರ ರಾಜೇಂದ್ರ ಚೋಳ I ಅಧಿಕೃತಗೊಳಿಸಿದ್ದ ದಾಖಲೆಗಳೇ ಇವು.
1862ರಿಂದ ಈ ತಾಮ್ರ ಶಾಸನಗಳನ್ನು ಸಂರಕ್ಷಿಸಿಕೊಂಡು ಬಂದಿದ್ದ ಲೈಡೆನ್ ವಿಶ್ವವಿದ್ಯಾಲಯ ಮತ್ತು ನೆದರ್ಲ್ಯಾಂಡ್ಸ್ ಸರ್ಕಾರಕ್ಕೆ ಪ್ರಧಾನಿ ಮೋದಿ ಕೃತಜ್ಞತೆ ಸಲ್ಲಿಸಿದ್ದಾರೆ. ಕಳೆದ 14 ವರ್ಷಗಳಿಂದ ಭಾರತ ಸರ್ಕಾರ ಈ ಶಾಸನಗಳ ವಾಪಸಾತಿಗಾಗಿ ನಿರಂತರ ಪ್ರಯತ್ನ ನಡೆಸುತ್ತಿತ್ತು ಎಂದು ತಿಳಿದುಬಂದಿದೆ.
ಚೋಳರ ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿರುವ ಈ ಅಮೂಲ್ಯ ಶಾಸನಗಳು ಭಾರತಕ್ಕೆ ಮರಳುತ್ತಿರುವುದು ದೇಶದ ಇತಿಹಾಸ ಮತ್ತು ಪರಂಪರೆ ಸಂರಕ್ಷಣೆಯ ದೃಷ್ಟಿಯಿಂದ ಮಹತ್ವದ ಮೈಲಿಗಲ್ಲಾಗಿದೆ.