ಟೆಹ್ರಾನ್, ಮೇ. 13 (DaijiworldNews/AA): ಪಶ್ಚಿಮ ಏಷ್ಯಾ ಸಂಘರ್ಷ ಕೊನೆಗೊಳಿಸುವುದಕ್ಕೆ ಸಂಬಂಧಿಸಿದಂತೆ ನಾವು ಮುಂದಿಟ್ಟಿರುವ 14 ಅಂಶಗಳ ಪ್ರಸ್ತಾವವನ್ನು ಒಪ್ಪಿಕೊಳ್ಳಿ ಅಥವಾ ಸೋಲು ಸ್ವೀಕರಿಸಿ ಎಂದು ಇರಾನ್ ಅಮೆರಿಕಕ್ಕೆ ಎಚ್ಚರಿಸಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎದುರು ಇರಾನ್ ಮುಂದಿಟ್ಟಿರುವ 9 ಅಂಶಗಳ ಪ್ರಸ್ತಾವಕ್ಕೆ ಪ್ರತಿಯಾಗಿ ಪ್ರತಿಕ್ರಿಯೆ ನೀಡಿರುವ ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಖಿರ್ ಖಾಲೀಬಾಫ್, "ಅಮೆರಿಕ-ಇರಾನ್ ನಡುವೆ ಕಳೆದ ತಿಂಗಳು ನಡೆದ ಆರಂಭಿಕ ಸುತ್ತಿನ ಮಾತುಕತೆಯು ಯಾವುದೇ ಪ್ರಗತಿ ಸಾಧಿಸುವಲ್ಲಿ ವಿಫಲವಾಗಿದೆ. ಹಾಗಾಗಿ, ಎರಡು ತಿಂಗಳಿಂದ ಮುಂದುವರಿದಿರುವ ಸಂಘರ್ಷ ಕೊನೆಗೊಳ್ಳಬೇಕಾದರೆ, ಅಮೆರಿಕದ ಮುಂದೆ ಇರಾನ್ ಇಟ್ಟಿರುವ ಪ್ರಸ್ತಾವವನ್ನು ಒಪ್ಪದೆ ಪರ್ಯಾಯ ಆಯ್ಕೆಗಳಿಲ್ಲ" ಎಂದು ಹೇಳಿದರು.
"ಇರಾನ್ ಪ್ರಸ್ತಾವವನ್ನು ಒಪ್ಪದೆ ಬೇರೆ ಯಾವುದೇ ವಿಧಾನವು ಸಂಘರ್ಷಕ್ಕೆ ತೆರೆ ಎಳೆಯುವುದಿಲ್ಲ. ಅಮೆರಿಕವು ಬೇರೊಂದು ಪ್ರಯತ್ನಕ್ಕೆ ಮುಂದಾದರೆ, ಅದು ಮತ್ತೊಂದು ವೈಫಲ್ಯವಲ್ಲದೆ ಮತ್ತೇನೂ ಅಲ್ಲ" ಎಂದು ಪೋಸ್ಟ್ ಮಾಡಿದ್ದಾರೆ.
"ಅಮೆರಿಕದ ಪ್ರಸ್ತಾವಕ್ಕೆ ಒಪ್ಪದಿದ್ದರೆ, ಯಾವುದೇ ಕ್ಷಣದಲ್ಲಿ ಬೇಕಾದರೂ ಭಾರಿ ದಾಳಿ ನಿರೀಕ್ಷಿಸಬಹುದು ಎಂಬ ಅಮೆರಿಕದ ಬೆದರಿಕೆಗೆ ಇರಾನ್ ಮಣಿದಿಲ್ಲ. ಬದಲಿಗೆ, ಯುದ್ಧವನ್ನು ಅಮೆರಿಕದ ಎಷ್ಟು ದಿನ ಮುಂದುವರಿಸುತ್ತದೆಯೋ, ಅಲ್ಲಿಯವರೆಗೆ ಅಮೆರಿಕದ ತೆರಿಗೆದಾರರು ದಂಡ ತೆರಬೇಕಾಗುತ್ತದೆ" ಎಂದು ತಿಳಿಸಿದ್ದಾರೆ.