ಕಠ್ಮಂಡು, ಮೇ. 12 (DaijiworldNews/TA): ನೇಪಾಳದ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿದ್ದ ಟರ್ಕಿಶ್ ಏರ್ಲೈನ್ಸ್ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಭಾರೀ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಇಸ್ತಾನ್ಬುಲ್ನಿಂದ ಕಠ್ಮಂಡುವಿಗೆ ಬಂದಿದ್ದ ಟರ್ಕಿಶ್ ಏರ್ಲೈನ್ಸ್ ವಿಮಾನ ನಿನ್ನೆ ಮುಂಜಾನೆ ಲ್ಯಾಂಡ್ ಆಗುವ ವೇಳೆ ಈ ಘಟನೆ ಸಂಭವಿಸಿದೆ. ವಿಮಾನದಲ್ಲಿ 278 ಪ್ರಯಾಣಿಕರು ಮತ್ತು 11 ಸಿಬ್ಬಂದಿ ಇದ್ದರು ಎಂದು ತಿಳಿದುಬಂದಿದೆ.

ವಿಮಾನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಬಲಭಾಗದ ಟೈರ್ಗಳಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಎಚ್ಚೆತ್ತ ಸಿಬ್ಬಂದಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಶೀಘ್ರದಲ್ಲೇ ನಿಯಂತ್ರಣಕ್ಕೆ ತಂದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದು, ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎನ್ನಲಾಗಿದೆ. ಘಟನೆ ಬಳಿಕ ವಿಮಾನ ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಕುರಿತು ಟರ್ಕಿಶ್ ಏರ್ಲೈನ್ಸ್ ಹಾಗೂ ತ್ರಿಭುವನ್ ವಿಮಾನ ನಿಲ್ದಾಣದ ಆಡಳಿತದಿಂದ ಇನ್ನೂ ಅಧಿಕೃತ ಹೇಳಿಕೆ ಬಿಡುಗಡೆಯಾಗಿಲ್ಲ.
ಈ ಘಟನೆಯೊಂದಿಗೆ 2015ರಲ್ಲಿ ನಡೆದ ಟರ್ಕಿಶ್ ಏರ್ಲೈನ್ಸ್ ವಿಮಾನ ಅಪಘಾತದ ಘಟನೆ ಮತ್ತೆ ನೆನಪಾಗಿದೆ. ಆ ವೇಳೆ ಲ್ಯಾಂಡಿಂಗ್ ಸಮಯದಲ್ಲಿ ವಿಮಾನ ನಿಯಂತ್ರಣ ಕಳೆದುಕೊಂಡು ರನ್ವೇ ಬಳಿ ಉರುಳಿ ಬಿದ್ದಿತ್ತು. ಪರಿಣಾಮವಾಗಿ ಕಠ್ಮಂಡು ವಿಮಾನ ನಿಲ್ದಾಣವನ್ನು ನಾಲ್ಕು ದಿನಗಳ ಕಾಲ ಬಂದ್ ಮಾಡಲಾಗಿತ್ತು.