ಮಾಸ್ಕೋ, ಮೇ. 10 (DaijiworldNews/TA): ರಷ್ಯಾ-ಉಕ್ರೇನ್ ಯುದ್ಧ ಕಳೆದ ನಾಲ್ಕು ವರ್ಷಗಳಿಂದ ಜಗತ್ತಿನ ಗಮನ ಸೆಳೆದಿರುವ ರಷ್ಯಾ-ಉಕ್ರೇನ್ ಯುದ್ಧ ಇದೀಗ ಅಂತ್ಯದ ಹಂತ ತಲುಪಿದೆಯೇ ಎಂಬ ಪ್ರಶ್ನೆ ಮೂಡಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನೀಡಿದ ಹೊಸ ಹೇಳಿಕೆ ಜಾಗತಿಕ ಮಟ್ಟದಲ್ಲಿ ಶಾಂತಿ ಮಾತುಕತೆಗಳ ಬಗ್ಗೆ ಹೊಸ ನಿರೀಕ್ಷೆ ಹುಟ್ಟಿಸಿದೆ.

ಮಾಸ್ಕೋದಲ್ಲಿ ನಡೆದ ವಿಜಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಪುಟಿನ್, “ಯುದ್ಧ ಮುಗಿಯುವ ಹಂತಕ್ಕೆ ಬಂದಿದೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳುವ ಮೂಲಕ ಯುದ್ಧ ವಿರಾಮದ ಬಗ್ಗೆ ಪರೋಕ್ಷ ಸೂಚನೆ ನೀಡಿದ್ದಾರೆ.
ಈ ಹೇಳಿಕೆ ಜಾಗತಿಕ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಶಾಂತಿ ಒಪ್ಪಂದದ ಸಾಧ್ಯತೆಗಳ ಕುರಿತು ಹೊಸ ಕುತೂಹಲ ಮೂಡಿಸಿದೆ. ಡೊನಾಲ್ಡ್ ಟ್ರಂಪ್ ಸೂಚಿಸಿದ್ದ ಮೂರು ದಿನಗಳ ಕದನ ವಿರಾಮವನ್ನು ರಷ್ಯಾ ಮತ್ತು ಉಕ್ರೇನ್ ಪಾಲಿಸಲು ಆರಂಭಿಸಿವೆ ಎನ್ನಲಾಗಿದೆ.
ಇದರ ಜೊತೆಗೆ, ಎರಡೂ ದೇಶಗಳು ತಲಾ 1,000 ಕೈದಿಗಳನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿದ್ದು, ಯುದ್ಧ ಆರಂಭವಾದ ಬಳಿಕದ ಅತಿದೊಡ್ಡ ಕೈದಿಗಳ ವಿನಿಮಯಗಳಲ್ಲಿ ಇದೂ ಒಂದಾಗಿದೆ. ಶಾಂತಿ ಸಂಧಾನದ ಕುರಿತು ಮಾತನಾಡಿದ ಪುಟಿನ್, ಯುರೋಪಿಯನ್ ನಾಯಕರೊಂದಿಗೆ ಮತ್ತೆ ಸಂವಾದಕ್ಕೆ ಸಿದ್ಧ ಎಂದು ತಿಳಿಸಿದ್ದಾರೆ. ಆದರೆ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ನೇರ ಮಾತುಕತೆ ನಡೆಸಲು ಮೊದಲು ಶಾಂತಿ ಒಪ್ಪಂದದ ಕುರಿತ ಸಾಮಾನ್ಯ ಅರ್ಥೈಸಿಕೆ ಅಗತ್ಯ ಎಂದು ಷರತ್ತು ವಿಧಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ಯುದ್ಧವನ್ನು ಶಾಶ್ವತವಾಗಿ ಅಂತ್ಯಗೊಳಿಸಲು ಎರಡೂ ದೇಶಗಳು ಮುಂದಾಗಬೇಕು ಎಂದು ಕರೆ ನೀಡಿದ್ದಾರೆ. “ಎರಡನೇ ಮಹಾಯುದ್ಧದ ನಂತರ ಮಾನವ ಜೀವಹಾನಿಯ ದೃಷ್ಟಿಯಿಂದ ಇದು ಅತ್ಯಂತ ಭೀಕರ ಯುದ್ಧವಾಗಿದೆ” ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.
2022ರ ಫೆಬ್ರವರಿಯಲ್ಲಿ ಆರಂಭವಾದ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದು, ಲಕ್ಷಾಂತರ ಜನರು ತಮ್ಮ ಮನೆಗಳನ್ನು ತೊರೆಯಬೇಕಾದ ಪರಿಸ್ಥಿತಿ ಎದುರಿಸಿದ್ದಾರೆ. ಉಕ್ರೇನ್ನ ಅನೇಕ ನಗರಗಳು ಯುದ್ಧದಿಂದ ಸಂಪೂರ್ಣ ಹಾನಿಗೊಳಗಾಗಿದ್ದು, ಜಗತ್ತಿನ ಆರ್ಥಿಕ ಹಾಗೂ ರಾಜಕೀಯ ವ್ಯವಸ್ಥೆಯ ಮೇಲೂ ಇದರ ಪರಿಣಾಮ ಬೀರಿದೆ. ಈಗ ಪುಟಿನ್ ನೀಡಿರುವ ಹೊಸ ಹೇಳಿಕೆಯಿಂದ ಯುದ್ಧ ಅಂತ್ಯವಾಗುವ ನಿರೀಕ್ಷೆ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.