ವಾಷಿಂಗ್ಟನ್, ಮೇ. 09 (DaijiworldNews/AA): ರಷ್ಯಾ - ಉಕ್ರೇನ್ ನಡುವೆ ಮೇ 9ರಿಂದ 11ರವೆಗೆ 3 ದಿನಗಳ ತಾತ್ಕಾಲಿಕ ಕದನ ವಿರಾಮವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ಈ ಕುರಿತು ಟ್ರೂತ್ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, "2ನೇ ಮಹಾಯುದ್ಧದ ಕುರಿತಂತೆ ರಷ್ಯಾದಲ್ಲಿ ವಿಜಯ ದಿನವನ್ನು ಆಚರಿಸಲಾಗುತ್ತಿದ್ದು,ಯುದ್ಧದಲ್ಲಿ ಭಾಗಿಯಾಗಿದ್ದ ಉಕ್ರೇನ್ನಲ್ಲಿಯೂ ಆಚರಣೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ನನ್ನ ಕೋರಿಕೆಯ ಮೇರೆಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ ಇಬ್ಬರೂ ಸಹ ಯುದ್ಧಕ್ಕೆ ಮೂರು ದಿನಗಳ ಕದನವಿರಾಮ ಜಾರಿ ಮಾಡಲು ಪರಸ್ಪರ ಒಪ್ಪಿಗೆ ಸೂಚಿಸಿದ್ದಾರೆ ಎಂದು ಘೋಷಿಸಲು ಸಂತಸವಾಗುತ್ತಿದೆ" ಎಂದು ಮಾಹಿತಿ ನೀಡಿದ್ದಾರೆ.
"ಈ ಕದನವಿರಾಮದ ಸಮಯದಲ್ಲಿ ಉಭಯದೇಶಗಳ ನಡುವಿನ ಎಲ್ಲಾ ರೀತಿಯ ಚಲನಶೀಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದರ ಜೊತೆಗೆ ಪರಸ್ಪರ ಎರಡೂ ದೇಶಗಳಲ್ಲಿ ಬಂಧಿಸಲಾಗಿರುವ ಯುದ್ಧ ಕೈದಿಗಳ ಪೈಕಿ ಪ್ರತಿದೇಶದಿಂದ 1,000 ಕೈದಿಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ" ಎಂದು ಪೋಸ್ಟ್ ಮಾಡಿದ್ದಾರೆ.
ಈ ಕುರಿತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸಹ ಅಧಿಕೃತವಾಗಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, "ಮೇ 9ರಿಂದ ಮೇ 11ರವರೆಗೆ ರಷ್ಯಾದೊಂದಿಗೆ ಕದನವಿರಾಮ ಮಾಡಿಕೊಳ್ಳುತ್ತಿದ್ದು, ಇದರ ಭಾಗವಾಗಿ ಯುದ್ಧದಲ್ಲಿ ಸೆರೆಯಾದ 1,000 ಕೈದಿಗಳನ್ನು ವಿನಿಮಯ ಮಾಡಿಕೊಳ್ಳುವುದಕ್ಕೆ ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಫಲಪ್ರದ ರಾಜತಾಂತ್ರಿಕ ಮಾತುಕತೆಗಳಲ್ಲಿ ಒಳಗೊಂಡಿರುವುದಕ್ಕೆ ಅಮೆರಿಕ ಅಧ್ಯಕ್ಷರು ಹಾಗೂ ಅವರ ತಂಡಕ್ಕೆ ನಾನು ಧನ್ಯವಾದ ಹೇಳುತ್ತೇನೆ" ಎಂದು ತಿಳಿಸಿದ್ದಾರೆ.