ರಿಯಾದ್, ಮೇ. 07 (DaijiworldNews/TA): ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದ “ಪ್ರಾಜೆಕ್ಟ್ ಫ್ರೀಡಂ” ಮಿಲಿಟರಿ ಕಾರ್ಯಾಚರಣೆ ಕೇವಲ 36 ಗಂಟೆಗಳಲ್ಲಿ ಸ್ಥಗಿತಗೊಂಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಹಾರ್ಮುಜ್ ಜಲಸಂಧಿಯ ಭದ್ರತೆ ಮತ್ತು ಸಾಗಣೆ ಮಾರ್ಗವನ್ನು ಮುಕ್ತವಾಗಿಡುವ ಉದ್ದೇಶದಿಂದ ಅಮೆರಿಕ ಈ ಕಾರ್ಯಾಚರಣೆಯನ್ನು ಭಾರಿ ಘೋಷಣೆಗಳೊಂದಿಗೆ ಆರಂಭಿಸಿತ್ತು. ಆದರೆ ಆರಂಭವಾದ ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಡೊನಾಲ್ಡ್ ಟ್ರಂಪ್, ಪಾಕಿಸ್ತಾನ ಸೇರಿದಂತೆ ಕೆಲವು ರಾಷ್ಟ್ರಗಳು ಮಾತುಕತೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದರಿಂದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ. “ಪ್ರದೇಶದಲ್ಲಿ ಉದ್ವಿಗ್ನತೆ ಕಡಿಮೆ ಮಾಡಲು ಮತ್ತು ಯುದ್ಧ ತಪ್ಪಿಸಲು ಮಾತುಕತೆಗಳು ಉತ್ತಮ ಹಂತದಲ್ಲಿ ಸಾಗುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರಾಜೆಕ್ಟ್ ಫ್ರೀಡಂ ಅನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ,” ಎಂದು ಟ್ರಂಪ್ ತಿಳಿಸಿದ್ದಾರೆ.
ಆದರೆ ಟ್ರಂಪ್ ಅವರ ಈ ಹೇಳಿಕೆ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ಕಾರ್ಯಾಚರಣೆ ಹಿಂಪಡೆಯಲು ರಾಜತಾಂತ್ರಿಕ ಒತ್ತಡಕ್ಕಿಂತಲೂ ಬೇರೆ ಕಾರಣಗಳಿರಬಹುದು ಎಂಬ ಚರ್ಚೆ ಜೋರಾಗಿದೆ. ವಿಶೇಷವಾಗಿ ವಿಮಾನಗಳ ಸಂಚಾರ ಮತ್ತು ಸಮುದ್ರ ಮಾರ್ಗದ ಭದ್ರತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಅಮೆರಿಕ ನಿರೀಕ್ಷಿತ ಬೆಂಬಲ ಪಡೆಯಲು ವಿಫಲವಾಗಿದೆ ಎಂಬ ವರದಿಗಳು ಹೊರಬಿದ್ದಿವೆ.
ಇದೇ ವೇಳೆ, ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಅಮೆರಿಕ ಹಠಾತ್ ಕಾರ್ಯಾಚರಣೆ ಸ್ಥಗಿತಗೊಳಿಸಿರುವುದು ಜಾಗತಿಕ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಟ್ರಂಪ್ ನಂತರ ಪಾಕಿಸ್ತಾನವನ್ನು ಉಲ್ಲೇಖಿಸಿ ಹೇಳಿಕೆ ನೀಡಿರುವುದೂ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ.