ಬೀಜಿಂಗ್, ಮೇ. 05 (DaijiworldNews/AA): ಪಟಾಕಿ ಉತ್ಪಾದನಾ ಘಟಕದಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, 21 ಮಂದಿ ಮೃತಪಟ್ಟು, 61 ಜನ ಗಾಯಗೊಂಡಿರುವ ಘಟನೆ ಚೀನಾದ ಹುನಾನ್ ಪ್ರಾಂತ್ಯದ ಲಿಯುಯಾಂಗ್ ನಗರದಲ್ಲಿ ಸಂಭವಿಸಿದೆ.

ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ಗುವಾಂಡು ಟೌನ್ಶಿಪ್ನಲ್ಲಿರುವ ಲಿಯುಯಾಂಗ್ ಹುವಾಶೆಂಗ್ ಪಟಾಕಿ ಉತ್ಪಾದನೆ ಮತ್ತು ಪ್ರದರ್ಶನ ಸಹಕಾರ ಕಾರ್ಖಾನೆಯಲ್ಲಿ ಈ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ 21 ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, 61 ಜನ ಗಾಯಗೊಂಡಿದ್ದಾರೆ. ರಕ್ಷಣಾ ಮತ್ತು ಅಗ್ನಿಶಾಮಕ ದಳದ ತಂಡಗಳು ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಹಾರ ಕಾರ್ಯಗಳನ್ನು ಪ್ರಾರಂಭಿಸಿದವು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಚೀನಾ ಅಧ್ಯಕ್ಷ ಜಿನ್ಪಿಂಗ್ ತನಿಖೆಗೆ ಆದೇಶಿಸಿದ್ದಾರೆ.
ಲಿಯುಯಾಂಗ್ನಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಭಾರಿ ಸ್ಫೋಟದ ನಂತರ ಬೃಹತ್ ರಕ್ಷಣಾ ಮತ್ತು ಪರಿಹಾರ ಕಾರ್ಯ ನಡೆಯುತ್ತಿದೆ. ಸುಮಾರು 500 ರಕ್ಷಣಾ ಕಾರ್ಯಕರ್ತರನ್ನು ಸ್ಥಳಕ್ಕೆ ನಿಯೋಜಿಸಲಾಗಿದೆ. ಇನ್ನು ಅಲ್ಲಿನ ಎರಡು ಗೋದಾಮುಗಳಲ್ಲಿ ಸಂಗ್ರಹಿಸಲಾದ ಸ್ಫೋಟಕಗಳು ಅಪಾಯಕಾರಿ ಅಪಾಯಗಳಾಗಿ ಉಳಿದಿರುವ ಕಾರಣ ಕಾರ್ಖಾನೆಯ 3 ಕಿಲೋಮೀಟರ್ ವ್ಯಾಪ್ತಿಯೊಳಗಿನ ನಿವಾಸಿಗಳನ್ನು ಅಧಿಕಾರಿಗಳು ಸ್ಥಳಾಂತರಿಸಿದ್ದಾರೆ.