ಟೆಹ್ರಾನ್, ಮಾ. 30 (DaijiworldNews/AA): ಕುವೈತ್ನ ವಿದ್ಯುತ್ ಸ್ಥಾವರ ಮತ್ತು ನಿರ್ಲವಣೀಕರಣ ಘಟಕದ ಮೇಲೆ ಇರಾನ್ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಭಾರತೀಯ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ.

ಭಾನುವಾರ ಸಂಜೆ ಈ ಘಟನೆ ಸಂಭವಿಸಿದ್ದು, ದಾಳಿಯಲ್ಲಿ ವಿದ್ಯುತ್ ಘಟಕದ ಕಟ್ಟಡವೊಂದಕ್ಕೆ ಭಾರೀ ಹಾನಿಯಾಗಿದೆ. ಇದು ದೇಶದ ಮೇಲೆ ಇರಾನ್ ನಡೆಸಿದ ಅತಿದೊಡ್ಡ ಆಕ್ರಮಣಗಳಲ್ಲಿ ಒಂದಾಗಿದೆ ಎಂದು ಕುವೈತ್ನ ವಿದ್ಯುತ್, ನೀರು ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಹೇಳಿದೆ.
ಇಸ್ರೇಲ್ನತ್ತ ಉಡಾಯಿಸಲಾದ ಕ್ಷಿಪಣಿಗಳ ಮೂಲಕ 'ಭಾರತದ ಜನರಿಗೆ ಧನ್ಯವಾದಗಳು' ಎಂದು ಇರಾನ್ ಹೇಳಿದ ಮರುದಿನವೇ ಈ ದಾಳಿ ನಡೆಸಲಾಗಿದೆ. ಇಸ್ರೇಲ್ ಮತ್ತು ಇತರ ದೇಶಗಳ ಮೇಲೆ ಉಡಾಯಿಸಲಾದ ಕ್ಷಿಪಣಿಗಳ ಮೇಲೆ ಭಾರತ, ಜರ್ಮನಿ, ಪಾಕಿಸ್ತಾನ ಮತ್ತು ಸ್ಪೇನ್ ದೇಶಗಳಿಗೆ ಧನ್ಯವಾದ ಅರ್ಪಿಸುವ ಕೈಬರಹದ ಚೀಟಿಗಳನ್ನು ಇರಾನ್ ಅಂಟಿಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.