ಕೊಲಂಬೊ, ಮಾ. 29 (DaijiworldNews/TA): ಇಂಧನ ಸಂಕಷ್ಟವನ್ನು ಎದುರಿಸುತ್ತಿರುವ ಶ್ರೀಲಂಕಾಗೆ ಸಹಾಯಹಸ್ತ ಚಾಚಿದ ಭಾರತಗೆ ಅಧ್ಯಕ್ಷ ಅನುರ ಕುಮಾರ ಡಿಸಾನಾಯಕೆ ಧನ್ಯವಾದ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ಮಧ್ಯಪ್ರಾಚ್ಯ ಸಂಘರ್ಷದಿಂದ ಉಂಟಾದ ಇಂಧನ ಪೂರೈಕೆ ಸಮಸ್ಯೆಗಳ ಬಗ್ಗೆ ಕೆಲವು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದ್ದಾಗಿ ತಿಳಿಸಿದ್ದಾರೆ. ಭಾರತ ತಕ್ಷಣ ಸ್ಪಂದಿಸಿ ನೆರವು ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಭಾರತದಿಂದ 20,000 ಮೆಟ್ರಿಕ್ ಟನ್ ಡೀಸೆಲ್ ಮತ್ತು 18,000 ಮೆಟ್ರಿಕ್ ಟನ್ ಪೆಟ್ರೋಲ್ ಸೇರಿ ಒಟ್ಟು 38,000 ಮೆಟ್ರಿಕ್ ಟನ್ ಇಂಧನವನ್ನು ಕಳುಹಿಸಲಾಗಿದ್ದು, ಇದು ಈಗಾಗಲೇ ಕೊಲಂಬೊ ತಲುಪಿದೆ. ಈ ಸಹಾಯಕ್ಕೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೂ ಧನ್ಯವಾದ ತಿಳಿಸಿದ್ದಾರೆ. ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದಿಂದ ಜಾಗತಿಕ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ, ಶ್ರೀಲಂಕಾದಲ್ಲಿ ಇಂಧನ ಬಿಕ್ಕಟ್ಟು ತೀವ್ರಗೊಂಡಿದೆ. ವಿಶೇಷವಾಗಿ ಹಾರ್ಮುಜ್ ಜಲಸಂಧಿಯಲ್ಲಿ ಉಂಟಾದ ಅಡಚಣೆಗಳಿಂದ ಪೂರೈಕೆ ಮೇಲೆ ಪರಿಣಾಮ ಬೀರಿದೆ.
ಈ ಹಿನ್ನೆಲೆಯಲ್ಲಿ ಮಾ.24ರಂದು ಶ್ರೀಲಂಕಾ ಅಧ್ಯಕ್ಷರು ಪ್ರಧಾನಿ ಮೋದಿಗೆ ಕರೆ ಮಾಡಿ ನೆರವು ಕೋರಿದ್ದರು. ಭಾರತ ತಕ್ಷಣ ಸ್ಪಂದಿಸಿ ಇಂಧನ ಕಳುಹಿಸುವ ಮೂಲಕ ನೆರವಾಗಿತ್ತು. ಇಂಧನ ಕೊರತೆಯಿಂದಾಗಿ ಶ್ರೀಲಂಕಾ ಸರ್ಕಾರ ಮಾ.22ರಿಂದ ಇಂಧನ ದರವನ್ನು 25% ಏರಿಕೆ ಮಾಡಿದ್ದು, ಕಳೆದ ತಿಂಗಳಲ್ಲೇ ಇದು ಮೂರನೇ ಬಾರಿ ದರ ಏರಿಕೆಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಭಾರತದ ಸಹಾಯದಿಂದ ಶ್ರೀಲಂಕಾದಲ್ಲಿ ತಾತ್ಕಾಲಿಕವಾಗಿ ಇಂಧನ ಪೂರೈಕೆ ಸುಧಾರಿಸುವ ನಿರೀಕ್ಷೆ ವ್ಯಕ್ತವಾಗಿದೆ.