ಕೈವ್, ಮಾ. 29 (DaijiworldNews/AA): ಸೌದಿ ಅರೇಬಿಯಾದಲ್ಲಿರುವ ಅಮೆರಿಕದ ಪ್ರಿನ್ಸ್ ಸುಲ್ತಾನ್ ವಾಯುನೆಲೆಯ ಮೇಲೆ ಇತ್ತೀಚೆಗೆ ಇರಾನ್ ನಡೆಸಿದ ದಾಳಿಗೆ ರಷ್ಯಾ ಬೆಂಬಲ ನೀಡಿತ್ತು. ದಾಳಿ ನಡೆಸುವ ಕೆಲ ದಿನಗಳಿಗೂ ಮುನ್ನ ರಷ್ಯಾ ಪದೇ ಪದೇ ಅಮೆರಿಕ ವಾಯುನೆಲೆಯ ಚಿತ್ರವನ್ನು ತೆಗೆದುಕೊಂಡಿತ್ತು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.

ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ವೊಂದನ್ನ ಹಂಚಿಕೊಂಡಿರುವ ಅವರು, "ಇರಾನ್ ಗುಪ್ತಚರ ಸಂಸ್ಥೆಗೆ ರಷ್ಯಾ ಬೆಂಬಲ ನೀಡಿದೆ. ಮಾರ್ಚ್ 24 ಮತ್ತು ಮಾರ್ಚ್ 26 ರ ನಡುವೆ ರಷ್ಯಾದ ಉಪಗ್ರಹಗಳು ಮಧ್ಯಪ್ರಾಚ್ಯದಾದ್ಯಂತ ಅನೇಕ ಯುಎಸ್ ಮತ್ತು ಮಿತ್ರರಾಷ್ಟ್ರಗಳ ಕೇಂದ್ರಗಳನ್ನ ಸೆರೆಹಿಡಿದಿವೆ. ಇವುಗಳಲ್ಲಿ ಸೌದಿ ಅರೇಬಿಯಾ, ಕತಾರ್, ಕುವೈತ್, ಟರ್ಕಿ ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿನ ವಾಯುನೆಲೆಗಳು ಮತ್ತು ನಿರ್ಣಾಯಕ ಮೂಲಸೌಕರ್ಯಗಳು ಸೇರಿವೆ" ಎಂದಿದ್ದಾರೆ.
"ಮಾರ್ಚ್ 24 ರಂದು ರಷ್ಯಾದವರು ಹಿಂದೂ ಮಹಾಸಾಗರದಲ್ಲಿರುವ ದ್ವೀಪಸಮೂಹದಲ್ಲಿರುವ ಡಿಯಾಗೋ ಗಾರ್ಸಿಯಾ (ಯುಎಸ್-ಯುಕೆ ಜಂಟಿ ಮಿಲಿಟರಿ ಕೇಂದ್ರ) ಮಿಲಿಟರಿ ಸೌಲಭ್ಯ ಕೇಂದ್ರದ ಉಪಗ್ರಹ ಚಿತ್ರವನ್ನ ಸೆರೆಹಿಡಿದಿದ್ದರು. ಕುವೈತ್ನ ಅಂತಾರಾಷ್ಟ್ರೀಯ ಏರ್ಪೋರ್ಟ್, ಗ್ರೇಟರ್ ಬರ್ಗನ್ ತೈಲ ಸೌಲಭ್ಯ ಘಟಕದ ಕೆಲ ಮೂಲಸೌಕರ್ಯದ ಭಾಗಗಳ ಚಿತ್ರವನ್ನ ಸೆರೆಹಿಡಿದಿದ್ದಾರೆ. ಮಾರ್ಚ್ 25 ರಂದು ಅವರು ಸೌದಿ ಅರೇಬಿಯಾದ ಪ್ರಿನ್ಸ್ ಸುಲ್ತಾನ್ ವಾಯುನೆಲೆ, ಶೈಬಾ ತೈಲ ಮತ್ತು ಅನಿಲ ಘಟಕ, ಟರ್ಕಿಯ ಇನ್ಸಿರ್ಲಿಕ್ ವಾಯುನೆಲೆಯ ಚಿತ್ರ, ಮಾರ್ಚ್ 26 ರಂದು ಕತಾರ್ನಲ್ಲಿರುವ ಅಲ್ ಉದೈದ್ ವಾಯುನೆಲೆಯ ಚಿತ್ರಗಳನ್ನು ಉಪಗ್ರಹದ ಮೂಲಕ ಚಿತ್ರೀಕರಿಸಿದ್ದಾರೆ" ಎಂದು ಪೋಸ್ಟ್ ಮಾಡಿದ್ದಾರೆ.
ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ ಅವರು, "ರಷ್ಯಾದ ಉಪಗ್ರಹಗಳು ಮಾರ್ಚ್ 20, ಮಾರ್ಚ್ 23 ಮತ್ತು ಮಾರ್ಚ್ 25 ರಂದು ಪ್ರಿನ್ಸ್ ಸುಲ್ತಾನ್ ವಾಯುನೆಲೆಯ ಸ್ಯಾಟಲೈಟ್ ಚಿತ್ರಗಳನ್ನ ತೆಗೆದುಕೊಂಡಿತ್ತು. ಮಾರ್ಚ್ 26 ರಂದು ಇರಾನ್ ಈ ಕೇಂದ್ರದ ಮೇಲೆ ವಾಯುದಾಳಿ ನಡೆಸಿತು. 6 ಖಂಡಾಂತರ ಕ್ಷಿಪಣಿಗಳು ಮತ್ತು 29 ಡ್ರೋನ್ಗಳ ಹಾರಿಸಿತ್ತು. ಇದರಿಂದ ರಷ್ಯಾ ಇರಾನ್ ಜೊತೆಗೆ ಗುಪ್ತಚರ ಮಾಹಿತಿಯನ್ನು ಹಂಚಿಕೊಂಡಿರುವುದು 100% ಖಚಿತವಾಗಿದೆ" ಎಂದು ತಿಳಿಸಿದ್ದಾರೆ.