ಟೆಹ್ರಾನ್, ಮಾ. 25 (DaijiworldNews/AA): ಈ ಯುದ್ಧವನ್ನು ಯಾವಾಗ ಕೊನೆಗೊಳಿಸಬೇಕು, ಹೇಗೆ ಕೊನೆಗೊಳಿಸಬೇಕೆಂದು ಟ್ರಂಪ್ ನಿರ್ಧರಿಸಲು ನಾವು ಅವಕಾಶ ನೀಡುವುದಿಲ್ಲ. ಈ ಯುದ್ಧ ನಿಲ್ಲಬೇಕಾದರೆ ನಾವು ಹಾಕುವ ೫ ಷರತ್ತುಗಳನ್ನು ಒಪ್ಪಿಕೊಳ್ಳಬೇಕು ಎಂದು ಇರಾನ್ ಅಮೆರಿಕಕ್ಕೆ ತಿರುಗೇಟು ನೀಡಿದೆ.

'ನಮ್ಮ ಈ ಷರತ್ತುಗಳನ್ನು ಒಪ್ಪಿದ ಮೇಲೆ ಯುದ್ಧ ಕೊನೆಗೊಳ್ಳುತ್ತದೆ' ಎಂದು ಇರಾನ್ ಸ್ಪಷ್ಟಪಡಿಸಿದೆ. ಕದನ ವಿರಾಮಕ್ಕೆ ಸಮಯವನ್ನು ನಿಗದಿಪಡಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ ಪ್ರಯತ್ನವನ್ನು ದೃಢವಾಗಿ ತಿರಸ್ಕರಿಸಿರುವ ಇರಾನ್ ಅಮೆರಿಕ ಪಶ್ಚಿಮ ಏಷ್ಯಾದ ಯುದ್ಧದಲ್ಲಿ ಅತಿಯಾಗಿ ಮೂಗು ತೂರಿಸುತ್ತಿದೆ ಎಂದು ಹೇಳಿದೆ.
ಯುದ್ಧ ನಿಲ್ಲಿಸಲು ಇರಾನ್ ಹಾಕಿರುವ 5 ಪ್ರಮುಖ ಷರತ್ತುಗಳು:
* ಅಮೆರಿಕ ಮತ್ತು ಇಸ್ರೇಲ್ನಿಂದ ಆಕ್ರಮಣಶೀಲತೆ ಮತ್ತು ಟಾರ್ಗೆಟ್ ಮಾಡಿದ ಹತ್ಯೆಗಳನ್ನು ಸಂಪೂರ್ಣವಾಗಿ ನಿಲ್ಲಿಸುವುದು.
* ಇರಾನ್ ವಿರುದ್ಧ ಮುಂದಿನ ದಿನಗಳಲ್ಲಿ ಯಾವುದೇ ಮಿಲಿಟರಿ ಕ್ರಮ ಅಥವಾ ದಾಳಿ ನಡೆಸುವುದಿಲ್ಲ ಎಂದು ಭರವಸೆ ನೀಡುವುದು.
* ಯುದ್ಧ ಸಂಬಂಧಿತ ನಷ್ಟಗಳು ಮತ್ತು ಹಾನಿಗಳಿಗೆ ಸೂಕ್ತವಾದ ಪರಿಹಾರ ನೀಡುವುದು.
* ಮಿತ್ರ ಗುಂಪುಗಳು ಸೇರಿದಂತೆ ಎಲ್ಲಾ ಪ್ರಾದೇಶಿಕ ರಂಗಗಳಲ್ಲಿ ಹಗೆತನಕ್ಕೆ ಅಂತ್ಯ ಹಾಡುವುದು.
* ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್ಗೆ ಅಧಿಕಾರದ ಅಧಿಕೃತ ಮಾನ್ಯತೆ ನೀಡುವುದು.