ನ್ಯೂಯಾರ್ಕ್, ಮಾ. 23 (DaijiworldNews/AA): ಲ್ಯಾಂಡಿಂಗ್ ವೇಳೆ ಏರ್ ಕೆನಡಾ ಎಕ್ಸ್ಪ್ರೆಸ್ ವಿಮಾನ ಫೈರ್ ಟ್ರಕ್ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿ, 100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನ್ಯೂಯಾರ್ಕ್ನ ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಸಂಭವಿಸಿದೆ.

ಕೆನಡಾದ ಮಾಂಟ್ರಿಯಲ್ನಿಂದ ಬರುತ್ತಿದ್ದ ಏರ್ ಕೆನಡಾ ಎಕ್ಸ್ಪ್ರೆಸ್ ಸಿಆರ್ಜೆ- 900 ವಿಮಾನವು ರನ್ವೇ 4 ರಲ್ಲಿ ಲ್ಯಾಂಡ್ ಆಗಿತ್ತು. ಈ ವೇಳೆ ರನ್ ವೇ ನಲ್ಲೇ ಫೈರ್ ಟ್ರಕ್ಗೆ ವಿಮಾನ ಡಿಕ್ಕಿಯಾಗಿದೆ. ಈ ದುರಂತದ ಬಳಿಕ ಒಳ ಬರುವ ವಿಮಾನಗಳಿಗೆ ಏರ್ಪೋರ್ಟ್ ಮುಚ್ಚಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ವಿಮಾನ ಅಪಘಾತದ ಬಳಿಕ ರಕ್ಷಣಾ ಕಾರ್ಯಾಚರಣೆಯ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿವೆ. ವೀಡಿಯೋದಲ್ಲಿ ವಿಮಾನದ ಮುಂಭಾಗಕ್ಕೆ ಹಾನಿಯಾಗಿರುವುದು ಕಂಡುಬಂದಿದೆ. ವಿಮಾನ ಅಪಘಾತದಲ್ಲಿ ಗಾಯಗೊಂಡವರು ಹಾಗೂ ಹಾನಿಯ ಬಗ್ಗೆ ಅಧಿಕಾರಿಗಳು ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.