ಸಿಯಾಟಲ್, ಫೆ. 12 (DaijiworldNews/AA): 2023 ರಲ್ಲಿ ಅಮೆರಿಕದ ಸಿಯಾಟಲ್ ನಗರದಲ್ಲಿ ನಡೆದಿದ್ದ ಭೀಕರ ಕಾರು ಅಪಘಾತದಲ್ಲಿ ಸಾವಿಗೀಡಾಗಿದ್ದ ಭಾರತೀಯ ಮೂಲದ ವಿದ್ಯಾರ್ಥಿನಿ ಕುಟುಂಬಕ್ಕೆ 262 ಕೋಟಿ ರೂ. ಪರಿಹಾರ ನೀಡುವಂತೆ ಅಲ್ಲಿನ ನ್ಯಾಯಾಲಯ ಆದೇಶ ಹೊರಡಿಸಿದೆ.

ಕ್ರಾಸ್ವಾಕ್ನಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ವೇಗವಾಗಿ ಬಂದ ಪೊಲೀಸ್ ಕಾರೊಂದು ಜಾಹ್ನವಿ ಕಂದುಲಾ(23) ಅವರಿಗೆ ಢಿಕ್ಕಿ ಹೊಡೆದಿತ್ತು. ಜಾಹ್ನವಿ ಕಂದುಲಾ ಭಾರತದವರಾಗಿದ್ದು, ಸಿಯಾಟಲ್ನಲ್ಲಿರುವ ಈಶಾನ್ಯ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದರು.
ಢಿಕ್ಕಿಯ ರಭಸಕ್ಕೆ ಜಾಹ್ನವಿ 137 ಅಡಿ ಎತ್ತರಕ್ಕೆ ಹಾರಿ ರಸ್ತೆಬದಿ ಬಿದ್ದಿದ್ದರು. ವೇಗವಾಗಿ ಕಾರು ಓಡಿಸಕೊಂಡು ಬಂದಿದ್ದ ಪೊಲೀಸ್ ಅಧಿಕಾರಿ ಕೆವಿನ್ ಡೇವ್ ಅವರು ಸೌತ್ ಲೇಕ್ ಯೂನಿಯನ್ ಕ್ರಾಸ್ವಾಕ್ ಬಳಿಯ ವೇಗ ಮೀತಿಯನ್ನು ಮೀರಿದ್ದರು. ಗಂಟೆಗೆ 25 ಮೈಲು ವೇಗವಾಗಿ ಬರಬೇಕಿದ್ದ ಕಾರು, ಗಂಟೆಗೆ 74 ಮೈಲಿ ವೇಗದಲ್ಲಿ ಚಲಿಸುತ್ತಿತ್ತು. ಪೊಲೀಸ್ ಅಧಿಕಾರಿ ಕೆವಿನ್ ಡೇವ್ ಮಾದಕವಸ್ತು ಸೇವನೆ ಮಾಡಿ, ಫೋನ್ ನಲ್ಲಿ ಮಾತನಾಡುತ್ತಾ ಕಾರು ಚಲಾಯಿಸುತ್ತಿದ್ದರು ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಅಪಘಾತವಾಗಿ ತೀವ್ರ ಗಾಯಗಳಿಂದ ರಸ್ತೆಯಲ್ಲಿ ನರಳುತ್ತಿದ್ದ ಜಾಹ್ನವಿ ಕಂದುಲಾ ಬಳಿ ನಿಂತಿದ್ದ ಪೊಲೀಸ್ ಅಧಿಕಾರಿಗಳು ಜಾಹ್ನವಿ ಅವರ ನೋವನ್ನು ಅಪಹಾಸ್ಯ ಮಾಡಿದ್ದರು. ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಜಾಹ್ನವಿ ಅವರ ಕುಟುಂಬ ಪರಿಹಾರಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿತ್ತು.
ಘಟನೆ ಬಳಿಕ ಪೊಲೀಸ್ ಅಧಿಕಾರಿಗೆ ಅಜಾಗರೂಕ ಚಾಲನೆಗಾಗಿ 5,000 ಡಾಲರ್ ದಂಡ ವಿಧಿಸಲಾಯಿತ್ತು. ಜೊತೆಗೆ ಅವರನ್ನು ಪೊಲೀಸ್ ಇಲಾಖೆಯಿಂದ ವಜಾಗೊಳಿಸಲಾಗಿತ್ತು. ಇನ್ನು ಪೊಲೀಸರ ನಿರ್ಲಕ್ಷ್ಯದಿಂದ ಸಂಭವಿಸಿದ ಅಪಘಾತ ಪ್ರಕರಣಕ್ಕೆ ಅಮೆರಿಕ ಇತಿಹಾಸದಲ್ಲಿ ಇದುವರೆಗಿನ ಅತಿದೊಡ್ಡ ಪರಿಹಾರಗಳಲ್ಲಿ ಇದು ಕೂಡ ಒಂದಾಗಿದೆ.