ಢಾಕಾ, ಫೆ. 12 (DaijiworldNews/TA): ಬಾಂಗ್ಲಾದೇಶದಲ್ಲಿ ಇಂದು ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಗಳು ದೇಶದ ರಾಜಕೀಯ ಇತಿಹಾಸದಲ್ಲಿ ಮಹತ್ವದ ತಿರುವು ನೀಡುವಂತಿವೆ. 2024ರಲ್ಲಿ ಯುವಜನರ ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳು ಶೇಖ್ ಹಸೀನಾ ಅವರ ಸರ್ಕಾರ ಪತನಕ್ಕೆ ಕಾರಣವಾದ ಹಿನ್ನೆಲೆ, ಈ ಚುನಾವಣೆಯನ್ನು ವಿಶ್ವದ ಮೊದಲ “ಜೆನ್ಝಿ ಚುನಾವಣೆ” ಎಂದು ಕರೆಯಲಾಗುತ್ತಿದೆ.

ಆ ಪ್ರತಿಭಟನೆಗಳ ನಂತರ ಹಸೀನಾ ದೇಶ ತೊರೆದು ಭಾರತಕ್ಕೆ ತೆರಳಿದ್ದರು. ಹಸೀನಾ ನಿರ್ಗಮನದ ಬಳಿಕ ನೋಬೆಲ್ ಪುರಸ್ಕೃತ ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಇದೀಗ ನಡೆಯುತ್ತಿರುವ ಚುನಾವಣೆ ಕೇವಲ ಹೊಸ ಸರ್ಕಾರ ರಚನೆಗಾಗಿ ಮಾತ್ರವಲ್ಲ, ದೇಶದ ಸಾಂವಿಧಾನಿಕ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳಿಗೆ ದಾರಿ ಮಾಡಿಕೊಡುವಂತೆಯೂ ಕಾಣುತ್ತಿದೆ. ಸಂಸತ್ತಿನ ಚುನಾವಣೆಯ ಜೊತೆಗೆ 84 ಅಂಶಗಳ ಸುಧಾರಣಾ ಪ್ಯಾಕೇಜ್ ಕುರಿತ ಜನಾಭಿಪ್ರಾಯ ಸಂಗ್ರಹವೂ ನಡೆಯುತ್ತಿದೆ.
ಪ್ರಧಾನ ಮಂತ್ರಿಗೆ ಎರಡು ಅವಧಿಗಳ ಮಿತಿ, ನಿಷ್ಪಕ್ಷಪಾತ ಉಸ್ತುವಾರಿ ಸರ್ಕಾರ ವ್ಯವಸ್ಥೆಯ ಪುನಃಸ್ಥಾಪನೆ ಹಾಗೂ ಸಂಸತ್ತಿನಲ್ಲಿ ಮೇಲ್ಮನೆ ರಚನೆ ಸೇರಿದಂತೆ ಹಲವು ಬದಲಾವಣೆಗಳು ಪ್ರಸ್ತಾಪವಾಗಿವೆ. ಸ್ಥಳೀಯ ಸಮಯ ಬೆಳಗ್ಗೆ 7.30ರಿಂದ ಮತದಾನ ಆರಂಭವಾಗಿದ್ದು, ಸಂಜೆ 4 ಗಂಟೆಯವರೆಗೆ ನಡೆಯಲಿದೆ. ದೇಶದಾದ್ಯಂತ 299 ಸಂಸದೀಯ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಜಮಾತ್-ಇ-ಇಸ್ಲಾಮಿ ಅಭ್ಯರ್ಥಿಯ ನಿಧನದಿಂದಾಗಿ ಒಂದು ಕ್ಷೇತ್ರದಲ್ಲಿ ಮತದಾನ ಮುಂದೂಡಲಾಗಿದೆ. ಒಟ್ಟು 50 ರಾಜಕೀಯ ಪಕ್ಷಗಳು ಕಣದಲ್ಲಿದ್ದು, 1,755 ಅಭ್ಯರ್ಥಿಗಳು ಪಕ್ಷಗಳನ್ನು ಪ್ರತಿನಿಧಿಸುತ್ತಿದ್ದಾರೆ. 273 ಸ್ವತಂತ್ರ ಅಭ್ಯರ್ಥಿಗಳೂ ಸ್ಪರ್ಧಿಸುತ್ತಿದ್ದಾರೆ. ಸುಮಾರು 127 ಮಿಲಿಯನ್ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಈ ಬಾರಿ ಅವಾಮಿ ಲೀಗ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಪಕ್ಷದ ನೋಂದಣಿ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಪ್ರಮುಖ ಪೈಪೋಟಿ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (ಬಿಎನ್ಪಿ) ಮತ್ತು ಜಮಾತ್-ಇ-ಇಸ್ಲಾಮಿ ನೇತೃತ್ವದ ಮೈತ್ರಿಕೂಟದ ನಡುವೆ ನಡೆಯುತ್ತಿದೆ. 17 ವರ್ಷಗಳ ಸ್ವಯಂ-ಗಡಿಪಾರು ನಂತರ ದೇಶಕ್ಕೆ ಮರಳಿರುವ ಬಿಎನ್ಪಿ ನಾಯಕ ತಾರಿಕ್ ರೆಹಮಾನ್ ಪ್ರಮುಖ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ. ಬಾಂಗ್ಲಾದೇಶದ ಈ ಚುನಾವಣೆಯನ್ನು ವಿಶ್ವದ ಹಲವು ರಾಷ್ಟ್ರಗಳು, ವಿಶೇಷವಾಗಿ ಭಾರತ ಮತ್ತು ಚೀನಾ ಸೂಕ್ಷ್ಮವಾಗಿ ಗಮನಿಸುತ್ತಿವೆ.
ಹಸೀನಾ ನಿರ್ಗಮನದ ನಂತರ ಬಾಂಗ್ಲಾದೇಶದಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸಲು ಚೀನಾ ಪ್ರಯತ್ನಿಸುತ್ತಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಚೀನಾ ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ಬಾಂಗ್ಲಾದೇಶದ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿದ್ದು, ವಾರ್ಷಿಕ ದ್ವಿಪಕ್ಷೀಯ ವ್ಯಾಪಾರ ಸುಮಾರು 18 ಬಿಲಿಯನ್ ಡಾಲರ್ಗಳಷ್ಟಿದೆ. ಹಸೀನಾ ನಿರ್ಗಮನದ ಬಳಿಕ ಚೀನಾದ ಕಂಪನಿಗಳು ಬಾಂಗ್ಲಾದೇಶದಲ್ಲಿ ನೂರಾರು ಮಿಲಿಯನ್ ಡಾಲರ್ ಹೂಡಿಕೆ ಮಾಡಿರುವುದಾಗಿ ವರದಿಯಾಗಿದೆ. ಇತ್ತ ಇತ್ತೀಚೆಗೆ ಬಾಂಗ್ಲಾದೇಶ ಗಡಿಯ ಸಮೀಪ ಡ್ರೋನ್ ಕಾರ್ಖಾನೆ ಸ್ಥಾಪನೆಗೆ ಭಾರತ ಜತೆ ರಕ್ಷಣಾ ಒಪ್ಪಂದಕ್ಕೂ ಸಹಿ ಹಾಕಲಾಗಿದೆ. ಒಟ್ಟಾರೆ, ಇಂದಿನ ಚುನಾವಣೆ ಬಾಂಗ್ಲಾದೇಶದ ರಾಜಕೀಯ ಭವಿಷ್ಯವನ್ನಷ್ಟೇ ಅಲ್ಲ, ದಕ್ಷಿಣ ಏಷ್ಯಾದ ಭೂರಾಜಕೀಯ ಸಮೀಕರಣಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.