ಢಾಕಾ, ಫೆ. 11 (DaijiworldNews/TA): ಅಮೇರಿಕಾ ಮತ್ತು ಬಾಂಗ್ಲಾದೇಶ ನಡುವೆ ಮಹತ್ವದ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಒಪ್ಪಂದದ ಅನ್ವಯ, ಬಾಂಗ್ಲಾದೇಶಕ್ಕೆ ವಿಧಿಸಲಾಗುತ್ತಿದ್ದ ಟ್ಯಾರಿಫ್ ದರವನ್ನು ಅಮೇರಿಕಾ ಶೇ. 19ಕ್ಕೆ ಇಳಿಸಲು ಒಪ್ಪಿದೆ. ಅಲ್ಲದೆ, ಅಮೆರಿಕ ಮೂಲದ ಕೆಲ ಜವಳಿ ಮತ್ತು ಉಡುಪು ಉತ್ಪನ್ನಗಳಿಗೆ ಪೂರ್ಣ ಟ್ಯಾರಿಫ್ ವಿನಾಯಿತಿ ನೀಡಲಾಗುತ್ತದೆ.

ಇದಕ್ಕೆ ಪ್ರತಿಯಾಗಿ, ಅಮೆರಿಕದ ಹಲವಾರು ಕೃಷಿ ಮತ್ತು ಕೈಗಾರಿಕಾ ಉತ್ಪನ್ನಗಳಿಗೆ ಬಾಂಗ್ಲಾದೇಶ ತನ್ನ ಮಾರುಕಟ್ಟೆಯನ್ನು ಹೆಚ್ಚಿನ ಮಟ್ಟದಲ್ಲಿ ತೆರೆಯಲು ಒಪ್ಪಿದೆ. ಸೋಯಾ ಮತ್ತು ಡೈರಿ ಉತ್ಪನ್ನಗಳು, ಬೀಫ್, ಯಂತ್ರೋಪಕರಣಗಳು, ವಾಹನಗಳು ಹಾಗೂ ವಾಹನ ಬಿಡಿಭಾಗಗಳು, ರಾಸಾಯನಿಕಗಳು, ಹಣ್ಣುಗಳು ಮತ್ತು ವೈದ್ಯಕೀಯ ಸಾಧನಗಳು ಸೇರಿದಂತೆ ವಿವಿಧ ಉತ್ಪನ್ನಗಳಿಗೆ ಆದ್ಯತೆಯ ಪ್ರವೇಶ ಕಲ್ಪಿಸಲಾಗುತ್ತದೆ.
ಅದೇ ವೇಳೆ, ಅಮೆರಿಕದ ವಾಹನ ಸುರಕ್ಷತಾ ಮತ್ತು ಆಹಾರ ಗುಣಮಟ್ಟದ ಪ್ರಮಾಣಪತ್ರ ಹಾಗೂ ಮಾನದಂಡಗಳನ್ನು ಬಾಂಗ್ಲಾದೇಶ ಅಂಗೀಕರಿಸಲು ಸಮ್ಮತಿಸಿದೆ. ಮರುತಯಾರಿತ ಸರಕುಗಳ ಮೇಲಿನ ಆಮದು ನಿರ್ಬಂಧವನ್ನು ತೆಗೆದುಹಾಕಲಾಗುತ್ತದೆ ಎಂದು ಅಮೆರಿಕದ ಶ್ವೇತಭವನ ತಿಳಿಸಿದೆ. ಮುಂದಿನ 15 ವರ್ಷಗಳಲ್ಲಿ ಸುಮಾರು 15 ಬಿಲಿಯನ್ ಡಾಲರ್ ಮೌಲ್ಯದ ಅಮೆರಿಕನ್ ಇಂಧನ ಉತ್ಪನ್ನಗಳು ಮತ್ತು 3.5 ಬಿಲಿಯನ್ ಡಾಲರ್ ಮೌಲ್ಯದ ಕೃಷಿ ಉತ್ಪನ್ನಗಳನ್ನು ಖರೀದಿಸಲು ಬಾಂಗ್ಲಾದೇಶ ಬದ್ಧವಾಗಿದೆ.
ಬಿಮಾನ್ ಬಾಂಗ್ಲಾದೇಶ್ ಏರ್ಲೈನ್ಸ್ 14 ಬೋಯಿಂಗ್ ವಿಮಾನಗಳನ್ನು ಖರೀದಿಸಲು ಉದ್ದೇಶಿಸಿದೆ. ಇತರ ದೇಶಗಳ ಬದಲಿಗೆ ಅಮೆರಿಕದಿಂದ ಸೈನಿಕ ಉಪಕರಣಗಳನ್ನು ಖರೀದಿಸುವುದಕ್ಕೂ ಒಪ್ಪಂದದಲ್ಲಿ ಉಲ್ಲೇಖಿಸಲಾಗಿದೆ. ಕಳೆದ ವರ್ಷ ಡೊನಾಲ್ಡ್ ಟ್ರಂಪ್ ಆಡಳಿತ ಬಾಂಗ್ಲಾದೇಶದ ಮೇಲೆ ಶೇ. 37ರಷ್ಟು ಪ್ರತಿಸುಂಕ ವಿಧಿಸಿತ್ತು. ನಂತರ ಮಾತುಕತೆಯ ಮೂಲಕ ಅದನ್ನು ಶೇ. 20ಕ್ಕೆ ಇಳಿಸಲಾಗಿತ್ತು. ಇದೀಗ ಹೊಸ ವ್ಯಾಪಾರ ಒಪ್ಪಂದದೊಂದಿಗೆ ಟ್ಯಾರಿಫ್ ಮತ್ತಷ್ಟು ಇಳಿದು ಶೇ. 19ಕ್ಕೆ ಬಂದಿದೆ.
ಇದೇ ವೇಳೆ, ಭಾರತವು ತನ್ನ ಟ್ಯಾರಿಫ್ ದರವನ್ನು ಶೇ. 18ಕ್ಕೆ ಇಳಿಸಿಕೊಳ್ಳಲು ಯಶಸ್ವಿಯಾಗಿರುವುದು ಗಮನಾರ್ಹವಾಗಿದೆ. ಜವಳಿ ರಫ್ತು ಬಾಂಗ್ಲಾದೇಶದ ಪ್ರಮುಖ ಆದಾಯ ಮೂಲವಾಗಿದ್ದು, ಕಡಿಮೆ ಟ್ಯಾರಿಫ್ ದರಗಳು ಭಾರತ ಮತ್ತು ಬಾಂಗ್ಲಾದೇಶದ ಟೆಕ್ಸ್ಟೈಲ್ಸ್ ಕ್ಷೇತ್ರಗಳ ಸ್ಪರ್ಧಾತ್ಮಕತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.