ಕಾನೋ, ಫೆ. 09 (DaijiworldNews/TA): ಉತ್ತರ ನೈಜೀರಿಯಾದ ಕಾನೋ ರಾಜ್ಯದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸುಮಾರು 30 ಮಂದಿ ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ. ಕಾನೋ ರಾಜ್ಯದ ಗೆಜಾವಾ ಪ್ರದೇಶದ ಕ್ವಾನಾರ್ ಬಾರ್ಡೆ ಪಟ್ಟಣದ ಪ್ರಮುಖ ಹೆದ್ದಾರಿಯಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೊಡ್ಡ ಟ್ರೇಲರ್ ಟ್ರಕ್ ನಿಯಂತ್ರಣ ತಪ್ಪಿ ಉರುಳಿದ ಪರಿಣಾಮ ಈ ದುರ್ಘಟನೆ ನಡೆದಿದೆ.

ಅಧಿಕಾರಿಗಳ ಮಾಹಿತಿ ಪ್ರಕಾರ, ಟ್ರಕ್ ಕಾನೋ ನಗರದಿಂದ ಗುಜುಂಗು ಪಟ್ಟಣದ ಕಡೆಗೆ ಪ್ರಯಾಣಿಕರು ಮತ್ತು ಸರಕುಗಳನ್ನು ಸಾಗಿಸುತ್ತಿತ್ತು. ಅತಿ ವೇಗದಲ್ಲಿ ಚಲಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ಪಲ್ಟಿಯಾದ್ದರಿಂದ ಅದರಲ್ಲಿದ್ದ ಹಲವರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಗಾಯಗೊಂಡಿರುವ ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ರಾಜ್ಯದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಅಜಾಗರೂಕ ಚಾಲನೆಯೇ ಪ್ರಮುಖ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಾನೋ ರಾಜ್ಯಪಾಲ ಅಬ್ಬಾ ಕಬೀರ್ ಯೂಸುಫ್, “ಈ ದುರ್ಘಟನೆ ಹೃದಯವಿದ್ರಾವಕವಾಗಿದೆ. ಇದು ಸಂತ್ರಸ್ತ ಕುಟುಂಬಗಳಿಗೆ ಮಾತ್ರವಲ್ಲ, ಇಡೀ ಕಾನೋ ರಾಜ್ಯಕ್ಕೆ ತುಂಬಲಾರದ ನಷ್ಟ” ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.