ದುಬೈ, ಫೆ. 06 (DaijiworldNews/TA): ಭಾರತದ ಶಿಕ್ಷಣ ಕ್ಷೇತ್ರಕ್ಕೆ ಹೆಮ್ಮೆ ತರುವ ಸಾಧನೆಯನ್ನು ಮಾಡಿದ ರೂಬಲ್ ನಾಗಿ ಅವರು ಇತ್ತೀಚೆಗೆ ವಿಶ್ವದ ಪ್ರಸಿದ್ಧ GEMS Education Global Teacher Prize ಪ್ರಶಸ್ತಿ ಗೆದ್ದಿದ್ದಾರೆ. ಸುಮಾರು 1 ಮಿಲಿಯನ್ ಡಾಲರ್ (ಸುಮಾರು 8 ಕೋಟಿ ರೂ.) ಬಹುಮಾನ ನೀಡಲಾಗಿರುವ ಈ ಪ್ರಶಸ್ತಿ, ವಿಶ್ವದ ಅತ್ಯುತ್ತಮ ಶಿಕ್ಷಕರಿಗೆ ನೀಡಲಾಗುತ್ತದೆ. ದುಬೈನಲ್ಲಿ ನಡೆದ ಸಮಾರಂಭದಲ್ಲಿ ಸಾವಿರಾರು ನಾಮನಿರ್ದೇಶಿತರ ನಡುವೆ ರೂಬಲ್ ನಾಗಿ ಅತ್ಯುತ್ತಮ ಶಿಕ್ಷಕಿಯಾಗಿ ಆಯ್ಕೆಯಾಗಿದ್ದಾರೆ, ಇದು ಅವರ ಸಮಾಜಮುಖಿ ಸೇವೆಗೆ ದೊರೆತ ದೊಡ್ಡ ಗೌರವವಾಗಿದೆ.

ರೂಬಲ್ ನಾಗಿ ಯಾರು?:
ರೂಬಲ್ ನಾಗಿ ಕೇವಲ ಶಿಕ್ಷಕಿಯಲ್ಲ, ಒಬ್ಬ ಶಿಲ್ಪಕಲಾವಿದೆ, ಸಮಾಜ ಸೇವಕಿ ಮತ್ತು Rouble Nagi Art Foundation ಸ್ಥಾಪಕಿ. ಅವರು ಕೊಳೆಗೇರಿ ಪ್ರದೇಶಗಳ ಮಕ್ಕಳಿಗೆ ಶಿಕ್ಷಣ ತಲುಪಿಸುವ ಮಹತ್ವದ ಕಾರ್ಯವನ್ನು ಮಾಡಿದ್ದಾರೆ. ಶಿಕ್ಷಣದಿಂದ ದೂರ ಉಳಿದ ಬಡ ಮಕ್ಕಳಿಗೆ ಕಲಿಕೆಯ ಆಸಕ್ತಿ ಮೂಡಿಸಲು, ಗೋಡೆಗಳನ್ನು ತರಗತಿ ಕೋಠಡಿಗಳಾಗಿ ಪರಿವರ್ತಿಸಿ, ಅಕ್ಷರಮಾಲೆ, ಗಣಿತ, ವಿಜ್ಞಾನ ಮತ್ತು ಇತಿಹಾಸದ ಚಿತ್ರಗಳನ್ನು ಬೀದಿಬದಿಯ ಗೋಡೆಗಳ ಮೇಲೆ ಬಿಡುವ ಮೂಲಕ ಮಕ್ಕಳು ಆಟವಾಡುತ್ತಲೇ ಕಲಿಯುವ ವ್ಯವಸ್ಥೆ ರೂಪಿಸಿದ್ದಾರೆ.
ಇದು ಮಾತ್ರವಲ್ಲದೆ, ರೂಬಲ್ ನಾಗಿ ದೇಶಾದ್ಯಂತ 800ಕ್ಕೂ ಹೆಚ್ಚು ಕಲಿಕೆ ಕೇಂದ್ರಗಳನ್ನು ಸ್ಥಾಪಿಸಿದ್ದು, ಬಡ ಮತ್ತು ಹಿಂದುಳಿದ ಮಕ್ಕಳಿಗೆ ಉಚಿತವಾಗಿ ಜ್ಞಾನ ನೀಡುತ್ತಿದ್ದಾರೆ. ಅವರ ಪ್ರಯತ್ನದಿಂದ ಅನೇಕ ಮಕ್ಕಳ ಬದುಕು ಬದಲಾಗಿದೆ, ಆತ್ಮವಿಶ್ವಾಸ ಬೆಳೆದಿದ್ದು, ಹೊಸ ಭವಿಷ್ಯ ನಿರ್ಮಾಣವಾಗಿದೆ. ಕಲೆಯ ಮೂಲಕ ಶಿಕ್ಷಣ ತಲುಪಿಸುವ ಈ ವಿಭಿನ್ನ ಕಾರ್ಯಶೈಲಿ ಅವರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡುದಕ್ಕೆ ಕಾರಣವಾಗಿದೆ.
ರೂಬಲ್ ನಾಗಿ ಸಾಧನೆ ಪ್ರತಿಯೊಬ್ಬ ಶಿಕ್ಷಕರಿಗೂ ಪ್ರೇರಣೆಯಾಗಿದೆ ಮತ್ತು ಒಬ್ಬ ವ್ಯಕ್ತಿಯ ಸೇವಾಭಾವ ಹೇಗೆ ಸಮಾಜವನ್ನೇ ಬದಲಾಯಿಸಬಹುದು ಎಂಬುದಕ್ಕೆ ಜೀವಂತ ಉದಾಹರಣೆಯಾಗಿದೆ.