ಮಾಸ್ಕೋ, ಫೆ. 05 (DaijiworldNews/TA): ಭಾರತವು ಯಾವುದೇ ದೇಶದಿಂದ ಕಚ್ಚಾತೈಲವನ್ನು ಖರೀದಿಸಲು ಸಂಪೂರ್ಣವಾಗಿ ಸ್ವತಂತ್ರವಾಗಿದೆ ಎಂದು ರಷ್ಯಾ ಸ್ಪಷ್ಟಪಡಿಸಿದೆ. ರಷ್ಯಾ ಎಂದಿಗೂ ಭಾರತದ ಏಕೈಕ ಇಂಧನ ಪಾಲುದಾರನಾಗಿರಲಿಲ್ಲ ಮತ್ತು ತೈಲ ಖರೀದಿಯ ಮೂಲಗಳಲ್ಲಿ ಬದಲಾವಣೆ ಆಗುವುದು ಅಸಾಮಾನ್ಯವಲ್ಲ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಪೆಸ್ಕೋವ್, “ಇತರ ಎಲ್ಲಾ ಅಂತಾರಾಷ್ಟ್ರೀಯ ಇಂಧನ ತಜ್ಞರಂತೆ ನಮಗೂ ತಿಳಿದಿದೆ- ಭಾರತಕ್ಕೆ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಪೂರೈಸುವ ಏಕೈಕ ದೇಶ ರಷ್ಯಾ ಅಲ್ಲ. ಭಾರತವು ಸದಾ ವಿವಿಧ ದೇಶಗಳಿಂದ ತೈಲವನ್ನು ಖರೀದಿಸುತ್ತ ಬಂದಿದೆ. ಆದ್ದರಿಂದ ಇದರಲ್ಲಿ ಹೊಸದೇನೂ ಇಲ್ಲ” ಎಂದು ಹೇಳಿದ್ದಾರೆ.
ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಭಾಗವಾಗಿ, ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಿ ಅಮೆರಿಕ ಹಾಗೂ ಬಹುಶಃ ವೆನೆಜುವೆಲಾದಿಂದ ಹೆಚ್ಚಿನ ಕಚ್ಚಾತೈಲ ಖರೀದಿಸಲು ಒಪ್ಪಿಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ ಬೆನ್ನಲ್ಲೇ ಪೆಸ್ಕೋವ್ ಅವರ ಪ್ರತಿಕ್ರಿಯೆ ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿದ ರಷ್ಯಾ ವಕ್ತಾರರು, ಭಾರತವು ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುವ ಕುರಿತು ಮಾಸ್ಕೋಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಭಾರತದಿಂದ ಅಂತಹ ಯಾವುದೇ ಸೂಚನೆ ಬಂದಿಲ್ಲ ಎಂದು ಅವರು ಪುನರುಚ್ಚರಿಸಿದ್ದಾರೆ.
ಇದರ ನಡುವೆ ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾರಿಯಾ ಜಖರೋವಾ, ಭಾರತ–ರಷ್ಯಾ ನಡುವಿನ ಇಂಧನ ಸಹಕಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಹೈಡ್ರೋಕಾರ್ಬನ್ ವ್ಯಾಪಾರವು ಎರಡೂ ದೇಶಗಳಿಗೆ ಲಾಭದಾಯಕವಾಗಿದ್ದು, ಜಾಗತಿಕ ಇಂಧನ ಮಾರುಕಟ್ಟೆಯ ಸ್ಥಿರತೆಯನ್ನು ಕಾಪಾಡಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
“ಭಾರತದಿಂದ ರಷ್ಯಾದ ಹೈಡ್ರೋಕಾರ್ಬನ್ ಖರೀದಿ ಎರಡೂ ದೇಶಗಳಿಗೆ ಪ್ರಯೋಜನಕಾರಿಯಾಗಿದೆ. ನಮ್ಮ ಭಾರತೀಯ ಪಾಲುದಾರರೊಂದಿಗೆ ಇಂಧನ ಕ್ಷೇತ್ರದಲ್ಲಿ ಸಹಕಾರ ಮುಂದುವರಿಸಲು ನಾವು ಸಿದ್ಧರಾಗಿದ್ದೇವೆ” ಎಂದು ಜಖರೋವಾ ತಿಳಿಸಿದ್ದಾರೆ.
ಗಮನಾರ್ಹವಾಗಿ, ಸೋಮವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ-ಅಮೆರಿಕ ವ್ಯಾಪಾರ ಒಪ್ಪಂದವನ್ನು ಘೋಷಿಸಿದ್ದು, ಭಾರತದ ಮೇಲಿನ ಸುಂಕವನ್ನು ಶೇ.18ಕ್ಕೆ ಇಳಿಸಲಾಗಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ರಷ್ಯಾದಿಂದ ತೈಲ ಖರೀದಿಯನ್ನು ಕಡಿಮೆ ಮಾಡಿ ಅಮೆರಿಕ ಹಾಗೂ ವೆನೆಜುವೆಲಾದಿಂದ ಹೆಚ್ಚಿನ ತೈಲ ಖರೀದಿಸಲು ಒಪ್ಪಿಕೊಂಡಿದ್ದಾರೆ ಎಂಬುದಾಗಿ ಟ್ರಂಪ್ ಹೇಳಿಕೆ ನೀಡಿದ್ದಾರೆ.