ನವದೆಹಲಿ, ಫೆ. 05 (DaijiworldNews/TA): ಆಸ್ಟ್ರೇಲಿಯಾದಲ್ಲಿ ಮಹಾತ್ಮ ಗಾಂಧಿ ಅವರ ಕಂಚಿನ ಪ್ರತಿಮೆಯನ್ನು ಕತ್ತರಿಸಿ ಕದಿಯಲಾದ ಘಟನೆಗೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಆಸ್ಟ್ರೇಲಿಯಾ ಸರ್ಕಾರವನ್ನು ಒತ್ತಾಯಿಸಿದೆ.

ಮೆಲ್ಬೋರ್ನ್ನ ರೌವಿಲ್ಲೆ ಪ್ರದೇಶದಲ್ಲಿರುವ ಆಸ್ಟ್ರೇಲಿಯನ್ ಇಂಡಿಯನ್ ಕಮ್ಯುನಿಟಿ ಸೆಂಟರ್ನಲ್ಲಿ ಸ್ಥಾಪಿಸಲಾಗಿದ್ದ ಮಹಾತ್ಮ ಗಾಂಧಿ ಅವರ ಕಂಚಿನ ಪ್ರತಿಮೆಯನ್ನು ದುಷ್ಕರ್ಮಿಗಳು ಕಳವು ಮಾಡಿದ್ದಾರೆ. ಈ ಘಟನೆ ಭಾರತ-ಆಸ್ಟ್ರೇಲಿಯಾ ಸಂಬಂಧಗಳ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದೆ. ಘಟನೆಗೆ ಸಂಬಂಧಿಸಿ ಭಾರತವು ಆಸ್ಟ್ರೇಲಿಯಾದ ಅಧಿಕಾರಿಗಳೊಂದಿಗೆ ಔಪಚಾರಿಕವಾಗಿ ಮಾತುಕತೆ ನಡೆಸಿದ್ದು, ಪ್ರತಿಮೆಯನ್ನು ಕದ್ದವರನ್ನು ತಕ್ಷಣ ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.
‘ದಿ ಆಸ್ಟ್ರೇಲಿಯಾ ಟುಡೇ’ ವರದಿಯ ಪ್ರಕಾರ, ಈ ಪ್ರತಿಮೆಯನ್ನು ನವದೆಹಲಿಯ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ (ICCR) ಆಸ್ಟ್ರೇಲಿಯಾಗೆ ಉಡುಗೊರೆಯಾಗಿ ನೀಡಿತ್ತು. 2021ರ ನವೆಂಬರ್ 12ರಂದು ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ಈ ಪ್ರತಿಮೆಯನ್ನು ಅಧಿಕೃತವಾಗಿ ಉದ್ಘಾಟಿಸಿದ್ದರು.