ನವದೆಹಲಿ, ಡಿ. 27 (DaijiworldNews/TA): ಸಿರಿಯಾದ ಮಧ್ಯ ಭಾಗದಲ್ಲಿರುವ ಹೋಮ್ಸ್ ನಗರದಲ್ಲಿ ಪ್ರಾರ್ಥನೆಯ ಸಮಯದಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ 8 ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಸರ್ಕಾರಿ ನಿಯಂತ್ರಣದಲ್ಲಿರುವ ವಾಡಿ ಅಲ್-ದಹಾಬ್ ಪ್ರದೇಶದ ಇಮಾಮ್ ಅಲಿ ಬಿನ್ ಅಬಿ ತಾಲಿಬ್ ಮಸೀದಿಯೊಳಗೆ ಸ್ಫೋಟ ಸಂಭವಿಸಿದೆ ಎಂದು ಸಿರಿಯನ್ ಅರಬ್ ಸುದ್ದಿ ಸಂಸ್ಥೆ (SANA) ವರದಿ ಮಾಡಿದೆ. ಪ್ರಾರ್ಥನೆಯಲ್ಲಿ ತೊಡಗಿದ್ದ ಜನರ ನಡುವೆ ಸ್ಫೋಟ ಸಂಭವಿಸಿದ್ದರಿಂದ ಹೆಚ್ಚಿನ ಆತಂಕ, ಗೊಂದಲ ಉಂಟಾಗಿದೆ.
ಸ್ಫೋಟದ ತಕ್ಷಣವೇ ತುರ್ತು ಪ್ರತಿಕ್ರಿಯಾ ತಂಡಗಳು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ಸ್ಥಳಾಂತರಿಸಿವೆ. ಭದ್ರತಾ ಪಡೆಗಳು ಮಸೀದಿ ಹಾಗೂ ಸುತ್ತಮುತ್ತಲ ಪ್ರದೇಶವನ್ನು ಸುತ್ತುವರೆದು ಭದ್ರತೆ ಬಿಗಿಗೊಳಿಸಿವೆ. ಸ್ಫೋಟದ ಸ್ವರೂಪ ಮತ್ತು ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಇದು ಆತ್ಮಾಹುತಿ ದಾಳಿ ಇರಬಹುದೆಂಬ ಶಂಕೆಯನ್ನು ಭದ್ರತಾ ವಲಯಗಳು ವ್ಯಕ್ತಪಡಿಸಿವೆ. ಘಟನೆ ಸಂಬಂಧ ತನಿಖೆ ಮುಂದುವರಿದಿದೆ.