ವಾಷಿಂಗ್ಟನ್, ಡಿ. 26 (DaijiworldNews/TA): ನೈಜೀರಿಯಾದಲ್ಲಿ ಕ್ರೈಸ್ತರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದ ಐಸಿಸ್ ಉಗ್ರರ ವಿರುದ್ಧ ಅಮೆರಿಕ ಭಾರೀ ಬಾಂಬ್ ದಾಳಿ ನಡೆಸಿದೆ. ಕ್ರೈಸ್ತರ ಮೇಲಿನ ಹಿಂಸಾಚಾರಕ್ಕೆ ಪ್ರತೀಕಾರವಾಗಿ ಈ ಏರ್ಸ್ಟ್ರೈಕ್ ನಡೆಸಲಾಗಿದೆ ಎಂದು ಅಮೆರಿಕ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ‘ಟ್ರೂಥ್ ಸೋಶಿಯಲ್’ ಜಾಲತಾಣದ ಮೂಲಕ ಈ ದಾಳಿಯ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. “ಇಂದು ರಾತ್ರಿ ನನ್ನ ನಿರ್ದೇಶನದ ಮೇರೆಗೆ ವಾಯುವ್ಯ ನೈಜೀರಿಯಾದಲ್ಲಿ ಐಸಿಸ್ ಭಯೋತ್ಪಾದಕರ ವಿರುದ್ಧ ಅಮೆರಿಕ ಪ್ರಬಲ ಮತ್ತು ಮಾರಕ ದಾಳಿಯನ್ನು ಆರಂಭಿಸಿದೆ,” ಎಂದು ಟ್ರಂಪ್ ತಿಳಿಸಿದ್ದಾರೆ.
ಐಸಿಸ್ ಉಗ್ರರು ಮುಗ್ಧ ಕ್ರೈಸ್ತರನ್ನು ಹಲವು ವರ್ಷಗಳಿಂದ ಕ್ರೂರವಾಗಿ ಹತ್ಯೆ ಮಾಡುತ್ತಿದ್ದು, ಇಂತಹ ಹಿಂಸಾಚಾರ ಶತಮಾನಗಳಲ್ಲಿ ಕಾಣದ ಮಟ್ಟದಲ್ಲಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ. “ಕ್ರೈಸ್ತರ ಹತ್ಯೆಯನ್ನು ನಿಲ್ಲಿಸದಿದ್ದರೆ ನರಕಯಾತನೆ ಅನುಭವಿಸಬೇಕಾಗುತ್ತದೆ ಎಂದು ನಾನು ಈ ಹಿಂದೆ ಎಚ್ಚರಿಕೆ ನೀಡಿದ್ದೆ. ಇಂದು ಬಾಂಬ್ ದಾಳಿ ಮೂಲಕ ಆ ಎಚ್ಚರಿಕೆಯ ಅರ್ಥವನ್ನು ತೋರಿಸಿದ್ದೇವೆ,” ಎಂದು ಅವರು ಹೇಳಿದ್ದಾರೆ.
ಈ ದಾಳಿಯನ್ನು ಅಮೆರಿಕದ ಯುದ್ಧ ಇಲಾಖೆ ಸಮರ್ಥವಾಗಿ ನಡೆಸಿದ್ದು, ಇಂತಹ ಪ್ರಭಲ ಕಾರ್ಯಾಚರಣೆ ಅಮೆರಿಕದಿಂದ ಮಾತ್ರ ಸಾಧ್ಯ ಎಂದು ಟ್ರಂಪ್ ಹೇಳಿದರು. “ನನ್ನ ನಾಯಕತ್ವದಲ್ಲಿ ಅಮೆರಿಕ ಯಾವುದೇ ಕಾರಣಕ್ಕೂ ಇಸ್ಲಾಮಿಕ್ ಭಯೋತ್ಪಾದನೆಗೆ ಅವಕಾಶ ನೀಡುವುದಿಲ್ಲ. ದೇವರು ನಮ್ಮ ಸೈನ್ಯವನ್ನು ಆಶೀರ್ವದಿಸಲಿ. ಮೃತರಾದ ಉಗ್ರರು ಸೇರಿದಂತೆ ಎಲ್ಲರಿಗೂ ಕ್ರಿಸ್ಮಸ್ ಶುಭಾಶಯಗಳು,” ಎಂದು ಟ್ರಂಪ್ ಹೇಳಿದ್ದಾರೆ.
ಇದಲ್ಲದೆ, ಕ್ರೈಸ್ತರ ಮೇಲಿನ ಹತ್ಯೆಗಳು ಮುಂದುವರಿದರೆ ಮತ್ತೆ ತೀವ್ರ ದಾಳಿ ನಡೆಸಲಾಗುವುದು ಎಂದು ಟ್ರಂಪ್ ಉಗ್ರರಿಗೆ ಎಚ್ಚರಿಕೆ ನೀಡಿದ್ದಾರೆ. ನೈಜೀರಿಯಾವು ಐಸಿಸ್ಗೆ ಸಂಬಂಧಿಸಿದ ಬಣಗಳು ಮತ್ತು ಬೊಕೋ ಹರಾಮ್ ಸೇರಿದಂತೆ ಹಲವು ಉಗ್ರಗಾಮಿ ಸಂಘಟನೆಗಳಿಂದ ತೀವ್ರ ಹಿಂಸಾಚಾರವನ್ನು ಎದುರಿಸುತ್ತಿದೆ. ಮುಖ್ಯವಾಗಿ ದೇಶದ ಉತ್ತರ ಮತ್ತು ಈಶಾನ್ಯ ಭಾಗಗಳಲ್ಲಿ ಉಗ್ರರ ಹಾವಳಿ ಹೆಚ್ಚಾಗಿದೆ.
ಇತ್ತೀಚೆಗೆ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯಡಿ ಅಮೆರಿಕ ನೈಜೀರಿಯಾವನ್ನು ‘ನಿರ್ದಿಷ್ಟ ಕಾಳಜಿಯ ದೇಶ’ಗಳ ಪಟ್ಟಿಗೆ ಸೇರಿಸಿದೆ. ಕ್ರೈಸ್ತರ ಮೇಲಿನ ದೌರ್ಜನ್ಯ ಪ್ರಕರಣಗಳು ವರದಿಯಾದ ಹಿನ್ನೆಲೆ, ನೈಜೀರಿಯಾದಲ್ಲಿ ಉಗ್ರರ ವಿರುದ್ಧ ಮಿಲಿಟರಿ ದಾಳಿ ನಡೆಸುವಂತೆ ಪೆಂಟಗನ್ಗೆ ನಿರ್ದೇಶನ ನೀಡಿದ್ದೇನೆ ಎಂದು ಟ್ರಂಪ್ ನವೆಂಬರ್ ತಿಂಗಳಲ್ಲಿ ಹೇಳಿದ್ದರು.