ಢಾಕಾ, ಡಿ. 25 (DaijiworldNews/AK): ದೇಶದ ಜನತೆ ಶಾಂತಿ ಮತ್ತು ಸ್ಥಿರತೆ ತರಲು ಒಟ್ಟಾಗಿ ಕೆಲಸ ಮಾಡಬೇಕು. ಹಿಂದೂ, ಮುಸ್ಲಿಂ, ಕ್ರೈಸ್ತರಿಗಾಗಿ ಏಕತೆಯಿಂದ ಇರಬೇಕು ಎಂದು ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (ಬಿಎನ್ಪಿ) ಹಂಗಾಮಿ ಅಧ್ಯಕ್ಷ ತಾರಿಕ್ ರೆಹಮಾನ್ ಜನತೆಯಲ್ಲಿ ಮನವಿ ಮಾಡಿದ್ದಾರೆ.

ಬಾಂಗ್ಲಾದೇಶ ಪ್ರಧಾನಿ ಹುದ್ದೆ ಅಭ್ಯರ್ಥಿಯೂ ಆಗಿರುವ ರೆಹಮಾನ್, 17 ವರ್ಷಗಳ ನಂತರ ಢಾಕಾಗೆ ಬಂದಿಳಿದಿದ್ದಾರೆ. ಗುರುವಾರ ರೋಡ್ ಶೋ ಮಾಡಿ ಬಳಿಕ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ್ದಾರೆ.
ನಾವು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಾಗಿರಲಿ, ನಾವು ಯಾವುದೇ ಧರ್ಮವನ್ನು ನಂಬಲಿ, ನಾವು ಪಕ್ಷಾತೀತ ವ್ಯಕ್ತಿಗಳಾಗಿರಲಿ , ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಎಲ್ಲರೂ ಕೈಜೋಡಿಸಬೇಕು” ಎಂದು ರೆಹಮಾನ್ ಹೇಳಿದರು.
ಯುವ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ಹತ್ಯೆಯ ನಂತರ ಬಾಂಗ್ಲಾದಲ್ಲಿ ಭಾರಿ ಅಶಾಂತಿ ಮತ್ತು ರಾಜಕೀಯ ಅಸ್ಥಿರತೆ ಉಂಟಾಗಿದೆ. ಶೇಖ್ ಹಸೀನಾ ಸರ್ಕಾರದ ಪತನಕ್ಕೆ ಕಾರಣವಾದ ಕಳೆದ ವರ್ಷದ ಪ್ರತಿಭಟನೆಗಳ ರೂವಾರಿ ಉಸ್ಮಾನ್ ಆಗಿದ್ದರು. ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರ 60 ವರ್ಷದ ರೆಹಮಾನ್, ಬಾಂಗ್ಲಾದೇಶ ಚುನಾವಣೆಯಲ್ಲಿ ಪ್ರಧಾನಿ ಹುದ್ದೆಗೆ ಪ್ರಮುಖ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ.