ವಾಷಿಂಗ್ಟನ್, ಡಿ. 23 (DaijiworldNews/AA): 2.7 ಲಕ್ಷ ರೂ. ಹಣ ತೆಗೆದುಕೊಂಡು ಅಮೆರಿಕ ಬಿಟ್ಟು ಹೋಗಿ ಎಂದು ಅಕ್ರಮ ವಲಸಿಗರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬಂಪರ್ ಆಫರ್ ನೀಡಿದ್ದಾರೆ.

ದಾಖಲೆ ಇಲ್ಲದ ವಲಸಿಗರು ಸ್ವಯಂಪ್ರೇರಣೆಯಿಂದ ದೇಶವನ್ನು ತೊರೆಯಲು ಮೆಗಾ ಕ್ರಿಸ್ಮಸ್ ಪ್ರೋತ್ಸಾಹ ಧನವನ್ನು ಟ್ರಂಪ್ ಘೋಷಿಸಿದ್ದಾರೆ. ಅಕ್ರಮ ವಲಸಿಗರಿಗೆ ವರ್ಷಾಂತ್ಯದ ಮೊದಲು ಅಮೆರಿಕವನ್ನು ತೊರೆಯಲು ಒಪ್ಪಿದರೆ, ಪ್ರಯಾಣ ವೆಚ್ಚದ ಜೊತೆಗೆ 2,70,738 ರೂ. ನೀಡುವುದಾಗಿ ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆ (ಡಿಹೆಚ್ಎಸ್) ತಿಳಿಸಿದೆ. ಸಾಮೂಹಿಕ ಗಡಿಪಾರು ಹೆಚ್ಚಿಸಲು ಈ ಕ್ರಮಕೈಗೊಳ್ಳಲಾಗಿದೆ.
ವರ್ಷಾಂತ್ಯದೊಳಗೆ ಸಿಬಿಪಿ (ಕಸ್ಟಮ್ಸ್ & ಬಾರ್ಡರ್ ಪ್ರೊಟೆಕ್ಷನ್) ಹೋಮ್ ಅಪ್ಲಿಕೇಶನ್ ಮೂಲಕ ಸ್ವಯಂ-ಗಡಿಪಾರುಗೆ ಸೈನ್ ಅಪ್ ಮಾಡುವ ಅಕ್ರಮ ವಲಸಿಗರು ಉಚಿತ ವಿಮಾನ ಪ್ರಯಾಣದ ಜೊತೆಗೆ 2.7 ಲಕ್ಷ ರೂ. ಸ್ಟೈಫಂಡ್ ಪಡೆಯುತ್ತಾರೆ. ಈ ವಿಶೇಷ ಕೊಡುಗೆಯ ಲಾಭ ಪಡೆಯದ ಅಕ್ರಮ ವಲಸಿಗರಿಗೆ ಉಳಿಯುವುದು ಒಂದೇ ದಾರಿ. ಅವರನ್ನು ಬಂಧಿಸಿ ಗಡಿಪಾರು ಮಾಡಲಾಗುತ್ತದೆ. ಅವರು ಎಂದಿಗೂ ಅಮೆರಿಕಕ್ಕೆ ಹಿಂತಿರುಗಲು ಸಾಧ್ಯವಾಗುವುದಿಲ್ಲ ಎಂದು ಡಿಹೆಚ್ಎಸ್ ಎಚ್ಚರಿಕೆ ನೀಡಿದೆ.
ಸಿಬಿಪಿ ಹೋಮ್ ಅಪ್ಲಿಕೇಶನ್ ಮೂಲಕ ಸ್ವಯಂ-ಗಡಿಪಾರು ಮಾಡುವುದು ಈ ರಜಾದಿನಗಳಲ್ಲಿ ಅಕ್ರಮ ವಲಸಿಗರು ತಮಗೆ ಮತ್ತು ತಮ್ಮ ಕುಟುಂಬಗಳಿಗೆ ನೀಡಬಹುದಾದ ಅತ್ಯುತ್ತಮ ಉಡುಗೊರೆಯಾಗಿದೆ. ಇದು ವೇಗವಾದ, ಉಚಿತ ಮತ್ತು ಸುಲಭವಾದ ಪ್ರಕ್ರಿಯೆ. ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ, ನಿಮ್ಮ ಮಾಹಿತಿಯನ್ನು ಭರ್ತಿ ಮಾಡಿ, ಉಳಿದದ್ದನ್ನು ಡಿಹೆಚ್ಎಸ್ ನೋಡಿಕೊಳ್ಳುತ್ತದೆ. ನಿಮ್ಮ ಮನೆಗೆ ಹಿಂದಿರುಗುವ ಪ್ರಯಾಣಕ್ಕೆ ವ್ಯವಸ್ಥೆ ಮಾಡುವುದರ ಜೊತೆಗೆ ನಿಮಗೆ ಹಣ ತಲುಪಿಸಲಾಗುತ್ತದೆ ಎಂದು ಡಿಹೆಚ್ಎಸ್ ಮಾಹಿತಿ ನೀಡಿದೆ.