ಸೇಂಟ್ ಪೀಟರ್ಸ್ಬರ್ಗ್, ಡಿ. 11 (DaijiworldNews/TA): ರಷ್ಯಾದ ಎರಡನೇ ಅತಿದೊಡ್ಡ ನಗರ ಸೇಂಟ್ ಪೀಟರ್ಸ್ಬರ್ಗ್ನ ನೆವ್ಸ್ಕಿ ಜಿಲ್ಲೆಯಲ್ಲಿ ನಿನ್ನೆ ಸಂಜೆ ಸಂಭವಿಸಿದ ಭಯಾನಕ ಅಗ್ನಿ ಅವಘಡವು ನಗರವನ್ನೇ ನಡುಗಿಸಿದೆ. ಪ್ರಾವೊಬೆರೆಜ್ನಿ ಮಾರುಕಟ್ಟೆಯಲ್ಲಿ ಏಕಾಏಕಿ ಉಂಟಾದ ಬೆಂಕಿ ಮತ್ತು ನಂತರದ ಸ್ಫೋಟಗಳು ಜನರನ್ನು ಭೀತಗೊಳಿಸಿವೆ. ಈ ದುರಂತದಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಬೆಂಕಿಯ ತೀವ್ರತೆ ಎಷ್ಟಿತ್ತೆಂದರೆ ನೆವ್ಸ್ಕಿ ಜಿಲ್ಲೆಯ ಆಕಾಶವೇ ಕಪ್ಪು ಹೊಗೆಯಿಂದ ಆವರಿಸಿಕೊಳ್ಳುವಂತಿತ್ತು.

ನಗರದ ಅತಿದೊಡ್ಡ ವಾಣಿಜ್ಯ ಕೇಂದ್ರಗಳಲ್ಲಿ ಒಂದಾದ ಈ ಮಾರುಕಟ್ಟೆಯಲ್ಲಿ ಪ್ರತಿದಿನ ಸಾವಿರಾರು ಜನರ ಸಂಚಾರವಿದ್ದು, ಈ ದುರಂತವು ಖರೀದಿದಾರರು ಮತ್ತು ವ್ಯಾಪಾರಿಗಳನ್ನು ಆತಂಕಕ್ಕೊಳಪಡಿಸಿದೆ. ರಷ್ಯಾದ ತುರ್ತು ಪರಿಸ್ಥಿತಿ ಸಚಿವಾಲಯದ ಪ್ರಕಾರ, ಬೆಂಕಿಯು ಸುಮಾರು 1,500 ಚದರ ಮೀಟರ್ ವ್ಯಾಪ್ತಿಯನ್ನು ಆವರಿಸಿತು. ಅಗ್ನಿಶಾಮಕ ದಳ ಸ್ಥಳಕ್ಕೆ ತಲುಪುವಷ್ಟರಲ್ಲಿ ಹಲವಾರು ಕಟ್ಟಡಗಳು ಸಂಪೂರ್ಣವಾಗಿ ನಾಶವಾಗಿದ್ದವು. ಸುಮಾರು 30 ಅಗ್ನಿಶಾಮಕ ವಾಹನಗಳು ಮತ್ತು ನೂರಕ್ಕೂ ಹೆಚ್ಚು ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದರು.
ಅವಶೇಷಗಳಡಿ ಸಿಕ್ಕುಳಿದ ವ್ಯಕ್ತಿ ಮೃತಪಟ್ಟಿದ್ದು, ಶವವನ್ನು ಪತ್ತೆಹಚ್ಚಲಾಗಿದೆ. ಇನ್ನೊಬ್ಬರಿಗೆ ಎರಡು ಕಾಲು ಮುರಿದು ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಜೊತೆಗೆ 52 ವರ್ಷದ ಮಹಿಳೆ ಕಾರ್ಬನ್ ಮಾನಾಕ್ಸೈಡ್ ವಿಷದಿಂದ ಬಳಲಿರುವುದು ದೃಢಪಟ್ಟಿದೆ. ಸುಮಾರು 100 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಪ್ರತ್ಯಕ್ಷದರ್ಶಿಗಳ ಹೇಳಿಕೆಯ ಪ್ರಕಾರ, ಬೆಂಕಿಯು ಕೇವಲ ಸೆಕೆಂಡುಗಳಲ್ಲಿ ಮಾರುಕಟ್ಟೆಯಾದ್ಯಂತ ಪಸರಿಸಿತು. ಸ್ಫೋಟಗಳ ಭೀಕರ ಶಬ್ದ ಜನರನ್ನು ಭೀತಿಗೊಳಿಸಿತು. ಈ ಮಾರುಕಟ್ಟೆಯಲ್ಲಿ ಎಲೆಕ್ಟ್ರಾನಿಕ್ಸ್, ಬಟ್ಟೆ ಮತ್ತು ಗೃಹೋಪಯೋಗಿ ವಸ್ತುಗಳ ಮಾರಾಟ ಹೆಚ್ಚಾಗಿದ್ದರಿಂದ ಪ್ರತಿದಿನದ ವ್ಯವಹಾರ ಮೌಲ್ಯ ರೂ100 ಮಿಲಿಯನ್ಗೂ ಹೆಚ್ಚಿರುತ್ತದೆ ಎಂದು ವರದಿಯಾಗಿದೆ.
ಯುರೋಪಿಯನ್ ಮಾಧ್ಯಮ ನೆಕ್ಸ್ಟಾನ ವರದಿಯ ಪ್ರಕಾರ, ಈ ಘಟನೆ ಕುರಿತು ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ. ಸೇಂಟ್ ಪೀಟರ್ಸ್ಬರ್ಗ್ ರಷ್ಯಾ ತನಿಖಾ ಸಮಿತಿಯು ಸುರಕ್ಷತಾ ಅವಶ್ಯಕತೆಗಳನ್ನು ಪಾಲಿಸದಿರುವುದು ಸೇರಿದಂತೆ ಹಲವು ಆರೋಪಗಳನ್ನು ಹೊರಿಸಿದೆ. ಬೆಂಕಿಯ ಮೂಲ ಕಾರಣವನ್ನು ಇನ್ನೂ ಖಚಿತಪಡಿಸದಿದ್ದರೂ, ಎಲೆಕ್ಟ್ರಿಕಲ್ ದೋಷ ಅಥವಾ ಅಡುಗೆ ಪ್ರದೇಶದಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಮಾರುಕಟ್ಟೆಯು ಸೋವಿಯತ್ ಯುಗದಲ್ಲಿ ನಿರ್ಮಿತವಾದ ಕಟ್ಟಡವಾಗಿದ್ದು, ಅದರ ಶೈಥಿಲ್ಯವೂ ಅವಘಡಕ್ಕೆ ಕಾರಣವಾಗಿರಬಹುದು ಎಂದು ಅನುಮಾನಿಸಲಾಗಿದೆ. ಬೆಂಕಿ ನಂದಿಸುವ ಕಾರ್ಯ ಇನ್ನೂ ಮುಂದುವರಿದಿದ್ದು, ಹೆಚ್ಚಿನ ನಷ್ಟದ ಪ್ರಮಾಣ ತಿಳಿದುಬಂದಿಲ್ಲ.