ಇಸ್ರೇಲ್, ಡಿ. 11 (DaijiworldNews/TA): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ದೂರವಾಣಿ ಕರೆ ಮಾಡಿ, ಭಾರತ-ಇಸ್ರೇಲ್ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಕುರಿತು ಇಬ್ಬರು ನಾಯಕರು ಮಹತ್ವದ ಚರ್ಚೆ ನಡೆಸಿದರು. ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆ ಎಂಬ ಭಾರತದ ನಿಲುವನ್ನು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಸಂಭಾಷಣೆಯಲ್ಲಿ ಗಾಜಾ ಶಾಂತಿ ಯೋಜನೆ, ಮಧ್ಯಪ್ರಾಚ್ಯದ ಶಾಂತಿ ಪ್ರಯತ್ನಗಳು ಮತ್ತು ಪ್ರದೇಶದ ಭದ್ರತಾ ಪರಿಸ್ಥಿತಿಗಳ ಬಗ್ಗೆ ವಿಚಾರ ವಿನಿಮಯ ನಡೆಯಿತು. ಗಾಜಾ ಶಾಂತಿ ಯೋಜನೆಗೆ ಭಾರತದ ದೃಢ ಬೆಂಬಲವನ್ನು ಮೋದಿ ಪುನರುಚ್ಚರಿಸಿದ್ದು, ಭಯೋತ್ಪಾದನೆಯ ಎಲ್ಲಾ ರೂಪಗಳನ್ನು ಭಾರತ ಖಂಡಿಸುತ್ತದೆ ಎಂಬುದನ್ನು ನೆತನ್ಯಾಹುವಿಗೆ ತಿಳಿಸಿದ್ದಾರೆ.
ಭಾರತ-ಇಸ್ರೇಲ್ ಕಾರ್ಯತಂತ್ರದ ಪಾಲುದಾರಿಕೆಯ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಪ್ರಗತಿಯ ಬಗ್ಗೆ ಇಬ್ಬರೂ ನಾಯಕರೂ ತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಗಾಜಾ ಶಾಂತಿ ಯೋಜನೆಯ ಆರಂಭಿಕ ಅನುಷ್ಠಾನ ಮತ್ತು ಪ್ರದೇಶದಲ್ಲಿ ಶಾಂತಿ ಪುನರುಸ್ಥಾಪನೆಗೆ ಭಾರತ ಬದ್ಧವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ ಎನ್ನಲಾಗಿದೆ.
ಈ ಸಂಭಾಷಣೆ ಯುಎಸ್ ಬೆಂಬಲಿತ ಗಾಜಾ ಕದನ ವಿರಾಮ ಯೋಜನೆಯ ಎರಡನೇ ಹಂತ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂಬ ನೆತನ್ಯಾಹು ಹೇಳಿಕೆಯ ನಂತರ ನಡೆಯಿತು. ಆದರೆ ಇಸ್ರೇಲ್ ನಡೆಸುತ್ತಿರುವ ಉಲ್ಲಂಘನೆಗಳ ಹಿನ್ನೆಲೆಯಲ್ಲಿ ಕದನ ವಿರಾಮ ಮುಂದುವರಿಸಲು ಸಾಧ್ಯವಿಲ್ಲ ಎಂದು ಹಮಾಸ್ ಪ್ರತಿಕ್ರಿಯಿಸಿದ್ದು, ಒಪ್ಪಂದವನ್ನು ಗೌರವಿಸಲು ಇಸ್ರೇಲ್ ಮೇಲೆ ಒತ್ತಡ ಹೇಯುವಂತೆ ಮಧ್ಯವರ್ತಿಗಳಿಗೆ ಮನವಿ ಮಾಡಿದೆ.