ಕ್ಯಾನ್ಬೆರಾ, ಡಿ. 09 (DaijiworldNews/ AK) : 2018ರಲ್ಲಿ ಆಸ್ಟ್ರೇಲಿಯಾ ಮಹಿಳೆಯ ಕೊಲೆ ಪ್ರಕರಣದಲ್ಲಿ ಭಾರತೀಯ ಮೂಲದ ಮಾಜಿ ನರ್ಸ್ ಅಪರಾಧಿ ಎಂಬುದು ಸಾಬೀತಾಗಿದೆ.

ಏಳು ವರ್ಷಗಳ ಹಿಂದೆ ಕ್ವೀನ್ಸ್ಲ್ಯಾಂಡ್ನ ನಿರ್ಜನ ಕಡಲತೀರದಲ್ಲಿ ಆಸ್ಟ್ರೇಲಿಯಾದ ಮಹಿಳೆಯೊಬ್ಬರ ಶವ ಪತ್ತೆಯಾಗಿತ್ತು. ಭಾರತೀಯ ಮೂಲದ ಮಾಜಿ ಆಸ್ಪತ್ರೆ ನರ್ಸ್ ಆಕೆಯ ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥನಾಗಿದ್ದಾನೆ.
2018 ರಂದು ಕೈರ್ನ್ಸ್ನಿಂದ ಉತ್ತರಕ್ಕೆ ಸುಮಾರು 40 ಕಿ.ಮೀ ದೂರದಲ್ಲಿರುವ ವಾಂಗೆಟ್ಟಿ ಬೀಚ್ನಲ್ಲಿ ಟೊಯಾ ಕಾರ್ಡಿಂಗ್ಲೆ ಅವರ ದೇಹವು ಅರ್ಧ ಹೂತುಹೋಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆರೋಪಿ ರಾಜ್ವಿಂದರ್ ಸಿಂಗ್ ತನ್ನ ಹೆಂಡತಿಯೊಂದಿಗೆ ಜಗಳ ಮಾಡಿಕೊಂಡು ಬೀಚ್ಗೆ ಹೋಗಿದ್ದ. ಫಾರ್ಮಸಿ ಕೆಲಸಗಾರ್ತಿಯಾಗಿದ್ದ ಕಾರ್ಡಿಂಗ್ಲೆ ತನ್ನ ನಾಯಿ ಜೊತೆ ಬೀಚ್ನಲ್ಲಿ ವಾಕ್ ಮಾಡುತ್ತಿದ್ದರು. ಕಾರ್ಡಿಂಗ್ಲೆಯ ನಾಯಿ, ಸಿಂಗ್ನನ್ನು ನೋಡಿ ಬೊಗಳಿತು. ಇದರಿಂದ ಕೋಪಗೊಂಡು ಕಾರ್ಡಿಂಗ್ಲೆ ಜೊತೆ ಸಿಂಗ್ ಜಗಳ ತೆಗೆದಿದ್ದ. ಈ ವೇಳೆ ಆಕೆಗೆ ಚಾಕುವಿನಿಂದ ಇರಿದು ಮೃತದೇಹವನ್ನು ಮರಳಿನಲ್ಲಿ ಹೂತಿದ್ದ.
ಕೊಲೆಯಾದ ಎರಡು ದಿನಗಳ ನಂತರ ಸಿಂಗ್ ತನ್ನ ಕೆಲಸ, ಹೆಂಡತಿ ಮತ್ತು ಮೂವರು ಮಕ್ಕಳನ್ನು ಬಿಟ್ಟು ಆಸ್ಟ್ರೇಲಿಯಾದಿಂದ ಎಸ್ಕೇಪ್ ಆಗಿದ್ದ. ತನ್ನ ಅಜ್ಜ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಹೇಳಿಕೊಂಡು, ನಾಲ್ಕು ವರ್ಷಗಳ ಕಾಲ ಆತ ತಲೆಮರೆಸಿಕೊಂಡಿದ್ದ. ಈ ಸಮಯದಲ್ಲಿ ತನ್ನ ಕುಟುಂಬವನ್ನು ಸಂಪರ್ಕಿಸಿರಲಿಲ್ಲ.
2022ರ ನವೆಂಬರ್ನಲ್ಲಿ ದೆಹಲಿ ಪೊಲೀಸರು ಗುರುದ್ವಾರದಲ್ಲಿ ಆರೋಪಿಯನ್ನು ಬಂಧಿಸಿದರು. ನಂತರ 2023ರಲ್ಲಿ ಭಾರತದಿಂದ ಆಸ್ಟ್ರೇಲಿಯಾಕ್ಕೆ ಆರೋಪಿಯನ್ನು ಹಸ್ತಾಂತರಿಸಿದರು.