ಲಂಡನ್, ಡಿ. 08 (DaijiworldNews/TA): ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹಠಾತ್ ಹೃದಯಾಘಾತದಿಂದ ಮೃತಪಟ್ಟ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಸಮಾಜದಲ್ಲಿ ಆತಂಕ ಹೆಚ್ಚುತ್ತಿರುವ ಸಂದರ್ಭದಲ್ಲಿ, ಬ್ರಿಟನ್ನ ಒಬ್ಬ ಮಹಿಳೆಯ ಅದ್ಭುತ ಬದುಕು ವೈದ್ಯಲೋಕದ ಗಮನ ಸೆಳೆದಿದೆ. ಸೆಲ್ವಾ ಹುಸೈನ್ ಎಂಬ 39 ವರ್ಷದ ಮಹಿಳೆ ನೈಸರ್ಗಿಕ ಹೃದಯವಿಲ್ಲದೆ ಬದುಕುತ್ತಿರುವ ವಿಶ್ವದ ಅಪರೂಪದ ಉದಾಹರಣೆಯಾಗಿ ದಾಖಲಾಗಿದ್ದಾರೆ.

ಸೆಲ್ವಾ ಅವರಿಗೆ 39ನೇ ವಯಸ್ಸಿನಲ್ಲಿ ತೀವ್ರ ಹೃದಯಾಘಾತವಾಗಿದ್ದು, ಆ ನಂತರ ಅವರ ಹೃದಯ ಅಲ್ಪಪ್ರಮಾಣಕ್ಕೆ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿತು. ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ರೋಗಿಯ ಜೀವ ಉಳಿಯುವುದು ಅಸಾಧ್ಯ. ಆದರೆ ವೈದ್ಯರ ತುರ್ತು ಕ್ರಮದಿಂದ ಅವರು ಸಾವಿನ ದವಡೆಯಿಂದ ಹೊರಬಂದರು. ವೈದ್ಯರು ಅವರ ನೈಸರ್ಗಿಕ ಹೃದಯವನ್ನು ತೆಗೆದು ಹಾಕಿ, ಅದರ ಬದಲು ಕೃತಕ ಹೃದಯ ವ್ಯವಸ್ಥೆ ಅಳವಡಿಸಿದರು.
ಸೆಲ್ವಾ ಬಳಸುತ್ತಿರುವ ಕೃತಕ ಹೃದಯ ಪ್ರತಿ ಕ್ಷಣವೂ ಅವರ ಜೀವ ಉಳಿಸುವ ಕೆಲಸ ಮಾಡುತ್ತದೆ. ಸುಮಾರು 6 ಕೆ.ಜಿ ತೂಕದ ಈ ಯಂತ್ರ ದೇಹದ ಹೊರಗಿನಿಂದಲೇ ಕಾರ್ಯನಿರ್ವಹಿಸುತ್ತದೆ. ಇದು ಮೋಟಾರ್ ಮತ್ತು ಪಂಪ್ ವ್ಯವಸ್ಥೆಯನ್ನು ಹೊಂದಿದ್ದು, ಕೊಳವೆಗಳ ಮೂಲಕ ಎದೆಗೆ ಗಾಳಿಯನ್ನು ನೀಡುತ್ತದೆ. ಗಾಳಿಯ ಒತ್ತಡದ ಮೂಲಕ ರಕ್ತದ ಹರಿವು ಸಾಗುವುದರಿಂದ ಸೆಲ್ವಾ ಅವರ ದೇಹದ ರಕ್ತಪರಿಚಲನೆ ಸಾಮಾನ್ಯವಾಗಿ ನಡೆಯುತ್ತದೆ.
ಈ ಉಪಕರಣವನ್ನು ಯಾವಾಗಲೂ ತಮ್ಮ ಜೊತೆಯಲ್ಲೇ ಕೊಂಡೊಯ್ಯಬೇಕು ಎಂಬ ಕಾರಣಕ್ಕಾಗಿ ಸೆಲ್ವಾ ಅದನ್ನು ವಿಶೇಷವಾಗಿ ತಯಾರಿಸಿದ ಬ್ಯಾಗ್ನಲ್ಲಿ ಇಟ್ಟುಕೊಂಡು ಎಲ್ಲಿಗೆ ಬೇಕಾದರೂ ಹೊತ್ತುಕೊಂಡು ಹೋಗುತ್ತಾರೆ. ಎರಡು ಮಕ್ಕಳ ತಾಯಿಯಾಗಿರುವ ಅವರು ಕೃತಕ ಹೃದಯದ ಸಹಾಯದಿಂದ ದಿನನಿತ್ಯದ ಕೆಲಸಗಳನ್ನು ನಿರ್ವಹಿಸುತ್ತಾ ಸಾಮಾನ್ಯ ಜೀವನವನ್ನೇ ನಡೆಸುತ್ತಿದ್ದಾರೆ.
ಸೆಲ್ವಾ ಹುಸೈನ್ ಅವರ ಪ್ರಕರಣವು ಹೃದಯ ವೈಫಲ್ಯದಿಂದ ಪೀಡಿತರಾದ ರೋಗಿಗಳಿಗೆ ಹೊಸ ಭರವಸೆಯಾಗಿ ಪರಿಣಮಿಸಿದೆ. ತೀವ್ರ ಹೃದಯ ಕಾಯಿಲೆಗೆ ಬೇರೆ ಯಾವುದೇ ಚಿಕಿತ್ಸೆಯ ಆಯ್ಕೆಯಿಲ್ಲದ ಸಂದರ್ಭಗಳಲ್ಲಿ ಈ ತಂತ್ರಜ್ಞಾನ ಜೀವ ಉಳಿಸುವ ಸಾಮರ್ಥ್ಯ ಹೊಂದಿದೆ ಎಂದು ವೈದ್ಯಕೀಯ ತಜ್ಞರು ತಿಳಿಸಿದ್ದಾರೆ.
ವೈದ್ಯರ ಪ್ರಕಾರ, ಇದು ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ನೆರಳು ಮೂಡಿಸಿದ ಸಾಧನೆ, ಮುಂದಿನ ವರ್ಷಗಳಲ್ಲಿ ಗಂಭೀರ ಹೃದಯ ರೋಗಿಗಳಿಗೆ ಇದು ಪ್ರಾಣದೀಪವಾಗಬಹುದು.