ಇಸ್ಲಮಾಬಾದ್, ಸೆ. 16 (DaijiworldNews/AA): ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧವನ್ನು ನಿಲ್ಲಿಸಿದ್ದು ತಾನೇ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳುತ್ತಲೇ ಇದ್ದಾರೆ. ಆದರೆ ಭಾರತ ಅದನ್ನು ಪದೇ ಪದೇ ನಿರಾಕರಿಸುತ್ತಲೇ ಇದೆ. ಇದೀಗ ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನವಿರಾಮದಲ್ಲಿ ಅಮೆರಿಕದ ಪಾತ್ರವೇನೂ ಇಲ್ಲ ಎಂದು ಪಾಕಿಸ್ತಾನವೇ ಒಪ್ಪಿಕೊಂಡಿದೆ.

ಈ ಬಗ್ಗೆ ಮಾತನಾಡಿದ ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಅವರು, ಭಾರತವು ಕದನ ವಿರಾಮ ಮಾತುಕತೆಯಲ್ಲಿ ಅಥವಾ ಬೇರಾವುದೇ ದ್ವಿಪಕ್ಷೀಯ ಮಾತುಕತೆಯಲ್ಲಿ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ಎಂದಿಗೂ ಸ್ವೀಕರಿಸಲಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ಆಪರೇಷನ್ ಸಿಂಧೂರ್ ವೇಳೆ ನಡೆದ ಕದನವಿರಾಮದಲ್ಲೂ ಭಾರತ ಅಮೆರಿಕದ ಮಧ್ಯಸ್ಥಿಕೆಯನ್ನು ಒಪ್ಪಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
"ಕಾಶ್ಮೀರದ ವಿಷಯದಲ್ಲಿ ಅಮೆರಿಕದ ಮೂಲಕ ಮಾತುಕತೆಯ ಪ್ರಸ್ತಾಪ ಬಂದಿತ್ತು. ಆದರೆ ಭಾರತವು ಈ ವಿಷಯವು ದ್ವಿಪಕ್ಷೀಯವಾಗಿಯೇ ಉಳಿಯಬೇಕೆಂದು ಒತ್ತಾಯಿಸಿತು. ಮೂರನೇ ದೇಶದಿಂದ ಕದನವಿರಾಮದ ಮಾತುಕತೆಗೆ ಭಾರತ ಒಪ್ಪಲಿಲ್ಲ" ಎಂದು ಅವರು ತಿಳಿಸಿದ್ದಾರೆ.
"ಮೂರನೇ ವ್ಯಕ್ತಿಯ ಒಳಗೊಳ್ಳುವಿಕೆಗೆ ನಮಗೆ ಯಾವುದೇ ಅಭ್ಯಂತರವಿಲ್ಲ. ಆದರೆ ಭಾರತವು ಇದು ದ್ವಿಪಕ್ಷೀಯ ವಿಷಯ ಎಂದು ಸ್ಪಷ್ಟವಾಗಿ ಹೇಳುತ್ತಿದೆ. ಈ ವಿಷಯದಲ್ಲಿ ನಮ್ಮ ಅಭ್ಯಂತರವಿಲ್ಲ. ಆದರೆ ಮಾತುಕತೆಗಳು ಸಮಗ್ರವಾಗಿರಬೇಕು, ಭಯೋತ್ಪಾದನೆ, ವ್ಯಾಪಾರ, ಆರ್ಥಿಕತೆ, ಜಮ್ಮು ಮತ್ತು ಕಾಶ್ಮೀರ, ನಾವು ಈ ಹಿಂದೆ ಚರ್ಚಿಸಿದ ಎಲ್ಲಾ ವಿಷಯಗಳನ್ನು ಒಳಗೊಂಡಿರಬೇಕೆಂಬುದು ನಮ್ಮ ಒತ್ತಾಯ" ಎಂದು ಹೇಳಿದ್ದಾರೆ.