ವಾಷಿಂಗ್ಟನ್, ಆ. 20 (DaijiworldNews/AK): ಉಕ್ರೇನ್ ವಿರುದ್ಧದ ಯುದ್ಧ ಮುಂದುವರಿಸದಂತೆ ರಷ್ಯಾವನ್ನು ತಡೆಯಲು ಟ್ರಂಪ್ ಭಾರತದ ಮೇಲೆ ಸುಂಕ ವಿಧಿಸಿದ್ದಾರೆ ಎಂದು ಅಮೆರಿಕದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಹೇಳಿದ್ದಾರೆ.

ಶ್ವೇತಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾರತದ ಮೇಲೆ 50% ಆಮದು ಸುಂಕ ವಿಧಿಸುವುದರ ಹಿಂದಿನ ಉದ್ದೇಶ ರಷ್ಯಾದ ಮೇಲೆ ಒತ್ತಡ ತರುವುದಾಗಿತ್ತು. ಏಕೆಂದ್ರೆ ರಷ್ಯಾ-ಉಕ್ರೇನ್ ಯುದ್ಧ ಕೊನೆಗಾಣಿಸಲು ಸಾರ್ವಜನಿಕರಿಂದ ಭಾರೀ ಒತ್ತಡವಿತ್ತು. ಹಾಗಾಗಿಯೇ ಟ್ರಂಪ್ ಈ ಕ್ರಮ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಆದಷ್ಟು ಬೇಗ ಈ ಯುದ್ಧವನ್ನು ಕೊನೆಗಾಣಿಸಲು ಟ್ರಂಪ್ ಬಯಸಿದ್ದಾರೆ ಎಂದು ಲೀವಿಟ್ ತಿಳಿಸಿದ್ದಾರೆ. ಇದಕ್ಕೂ ಮುನ್ನ ಟ್ರಂಪ್ ಶ್ವೇತಭವನದಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನ ಭೇಟಿಯಾದರು, ಮಾಜಿ ಅಧ್ಯಕ್ಷರು ಉಕ್ರೇನ್ನಲ್ಲಿ ಯುದ್ಧವನ್ನು ಕೊನೆಗೊಳಿಸಲು ಮಾತುಕತೆ ನಡೆಸಲು ಪುಟಿನ್ ಅವರೊಂದಿಗೆ ತ್ರಿಪಕ್ಷೀಯ ಸಭೆ ನಡೆಸುವುದಾಗಿ ತಿಳಿಸಿದ್ದರು.
ಭಾರತ ಹಾಗೂ ಪಾಕಿಸ್ತಾನ ನಡುವಣ ಯುದ್ಧವನ್ನು ಕೊನೆಗೊಳಿಸಲು ಟ್ರಂಪ್ ಮಧ್ಯಸ್ಥಿಕೆ ವಹಿಸಿದ್ದಾರೆ ಎಂದೂ ಕ್ಯಾರೋಲಿನ್ ಮಗದೊಮ್ಮೆ ಪುನರುಚ್ಚರಿಸಿದ್ದಾರೆ. ಇಲ್ಲದಿದ್ದರೇ ನ್ಯೂಕ್ಲಿಯರ್ ಯುದ್ಧಕ್ಕೆ ಕಾರಣವಾಗುತ್ತಿತ್ತು ಎಂದು ಹೇಳಿದ್ದಾರೆ.