ವಾಷಿಂಗ್ಟನ್, ಆ. 19 (DaijiworldNews/TA): ಕಳೆದ ನಾಲ್ಕು ವರ್ಷಗಳಿಂದ ಯುದ್ಧದ ಭೀಕರತೆ ಅನುಭವಿಸುತ್ತಿರುವ ರಷ್ಯಾ ಮತ್ತು ಉಕ್ರೇನ್ ನಡುವೆ ಶಾಂತಿ ಸ್ಥಾಪನೆಯ ಭರವಸೆ ಮೂಡಿಸುವ ಬೆಳವಣಿಗೆಯೊಂದು ನಡೆದಿದೆ. ಉಭಯ ರಾಷ್ಟ್ರಗಳ ಅಧ್ಯಕ್ಷರಾದ ವ್ಲಾಡಿಮಿರ್ ಪುಟಿನ್ ಮತ್ತು ವೊಲೊಡಿಮಿರ್ ಝೆಲೆನ್ಸ್ಕಿ ಶಾಂತಿ ಮಾತುಕತೆಗೆ ಒಪ್ಪಿಗೆ ಸೂಚಿಸಿದ್ದಾರೆ. ಮೊದಲನೇ ಹಂತವಾಗಿ ಅವರ ನಡುವೆ ಶೀಘ್ರದಲ್ಲೇ ಮಾತುಕತೆ ನಡೆಯಲಿದ್ದು, ಸ್ಥಳವನ್ನೂ ಶೀಘ್ರದಲ್ಲಿ ಘೋಷಿಸಲಾಗುವ ಸಾಧ್ಯತೆ ಇದೆ.

ಈ ಮಹತ್ವದ ಬೆಳವಣಿಗೆಗೆ ಪೂರಕವಾಗಿ, ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಸೋಮವಾರ ರಾತ್ರಿ ಅಮೆರಿಕದ ಶ್ವೇತಭವನಕ್ಕೆ ಭೇಟಿ ನೀಡಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಿದರು. ಈ ಭೇಟಿ ವೇಳೆ, ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ವಿಶಿಷ್ಟ ಚರ್ಚೆ ನಡೆಯಿತು. ನಂತರ ಟ್ರಂಪ್ ಅವರು ತಕ್ಷಣವೇ ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಮಾತುಕತೆ ನಡೆಸಿದ್ದಾರೆ. ಇವರು ಇಬ್ಬರೂ ಶಾಂತಿಯತ್ತ ಹೆಜ್ಜೆ ಹಾಕಲು ಸಿದ್ಧವಿರುವುದಾಗಿ ಟ್ರಂಪ್ ಮಾಧ್ಯಮಗಳ ಮುಂದೆ ಘೋಷಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್, "ಇದು ಝೆಲೆನ್ಸ್ಕಿಯೊಂದಿಗಿನ ನನ್ನ ಕೊನೆಯ ಭೇಟಿಯಲ್ಲ. ಪುಟಿನ್ ಮತ್ತು ಝೆಲೆನ್ಸ್ಕಿ ಇಬ್ಬರೂ ಯುದ್ಧವನ್ನು ಕೊನೆಗೊಳಿಸಲು ಬಯಸುತ್ತಿದ್ದಾರೆ. ಝೆಲೆನ್ಸ್ಕಿ, ಪುಟಿನ್ ಜೊತೆ ನೇರವಾಗಿ ಮಾತನಾಡಲು ಸಿದ್ಧರಾಗಿದ್ದಾರೆ," ಎಂದು ಸ್ಪಷ್ಟಪಡಿಸಿದರು. ಕಳೆದ 6 ತಿಂಗಳಲ್ಲಿ 6 ಯುದ್ಧಗಳನ್ನು ನಿಲ್ಲಿಸಿದ್ದೇನೆ ಎಂದ ಅವರು, ಈ ಯುದ್ಧವನ್ನು ನಿಲ್ಲಿಸುವುದೂ ಅಸಾಧ್ಯವಲ್ಲ ಎಂಬ ಭರವಸೆ ವ್ಯಕ್ತಪಡಿಸಿದರು.
ಈ ಸಭೆಯ ನಂತರ, ಶಾಂತಿ ಸ್ಥಾಪನೆಯ ಮುಂದಿನ ಹಂತವಾಗಿ ತ್ರಿಪಕ್ಷೀಯ ಮಾತುಕತೆಗಳ ಸಾಧ್ಯತೆಗಳನ್ನೂ ಟ್ರಂಪ್ ಅವರು ತೋರಿಸಿದ್ದಾರೆ. “ಅಗತ್ಯವಿದ್ದರೆ, ನಾನು ಝೆಲೆನ್ಸ್ಕಿ ಮತ್ತು ಪುಟಿನ್ ಜೊತೆ ಕೂತು ಮಾತುಕತೆ ನಡೆಸಲು ಸಿದ್ಧ,” ಎಂಬ ಸಂದೇಶವನ್ನು ಅವರು ನೀಡಿದ್ದಾರೆ. ಜೊತೆಗೆ, "ಈ ಯುದ್ಧಕ್ಕೆ ಜೋ ಬೈಡನ್ ಕಾರಣ," ಎಂಬ ಆರೋಪವನ್ನೂ ಅವರು ನೇರವಾಗಿ ಹೊರಹಾಕಿದ್ದಾರೆ.
ಶ್ವೇತಭವನದ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಝೆಲೆನ್ಸ್ಕಿ, "ನಾನು ಯಾವುದೇ ಷರತ್ತುಗಳಿಲ್ಲದೆ ಪುಟಿನ್ ಅವರನ್ನು ಭೇಟಿಯಾಗಿ ಶಾಂತಿಯ ಬಗ್ಗೆ ಚರ್ಚಿಸಲು ಸಿದ್ಧನಿದ್ದೇನೆ," ಎಂದು ತಿಳಿಸಿದ್ದಾರೆ. ಅವರು ತ್ರಿಪಕ್ಷೀಯ ಸಭೆಯಲ್ಲಿ ಭಾಗವಹಿಸುವ ನಿರ್ಧಾರವನ್ನು ಮೊದಲ ಸಭೆಯ ಗತಿ ಮತ್ತು ಪರಿಣಾಮಗಳ ಆಧಾರದ ಮೇಲೆ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ಅಮೆರಿಕದಂತಹ ವಾಯು ರಕ್ಷಣಾ ವ್ಯವಸ್ಥೆ ಯಾರಿಗೂ ಇಲ್ಲ ಎಂಬುದಾಗಿ ಝೆಲೆನ್ಸ್ಕಿ ಹೆಮ್ಮೆಯಿಂದ ಹೇಳಿದ್ದಾರೆ. ಯುದ್ಧದ ತೀವ್ರತೆ, ಜನಮರಣ ಮತ್ತು ನಾಶವನ್ನು ಗಮನದಲ್ಲಿ ಇಟ್ಟುಕೊಂಡು ಶೀಘ್ರದಲ್ಲೇ ಶಾಂತಿ ಸ್ಥಾಪನೆಯ ಅಗತ್ಯವಿದೆ ಎಂಬ ಮಾತುಗಳನ್ನೂ ಅವರು ಪುನರುಚ್ಚರಿಸಿದರು. ಆಗಸ್ಟ್ 15ರಂದು ಅಲಾಸ್ಕಾದಲ್ಲಿ ಟ್ರಂಪ್ ಮತ್ತು ಪುಟಿನ್ ನಡುವೆ ನಡೆದ ದ್ವಿಪಕ್ಷೀಯ ಸಭೆಯಲ್ಲಿ ಯಾವುದೇ ಕದನ ವಿರಾಮದ ಒಪ್ಪಂದ ಆಗದಿದ್ದರೂ, ಈ ಹೊಸ ಬೆಳವಣಿಗೆ ಮತ್ತೊಂದು ನಿರೀಕ್ಷೆಯ ಕಿರಣವಾಗಿದೆ.