ಸೌದಿ ಅರೇಬಿಯಾ, ಜು. 20 (DaijiworldNews/AA): 20 ವರ್ಷಗಳ ಕಾಲ ಕೋಮಾದಲ್ಲಿದ್ದ ಸ್ಲೀಪಿಂಗ್ ಪ್ರಿನ್ಸ್ ಎಂದೇ ಹೆಸರಾಗಿದ್ದ ಸೌದಿ ಅರೇಬಿಯಾದ ರಾಜಕುಮಾರ ಅಲ್ ವಲೀದ್ ಬಿನ್ ಖಾಲಿದ್ ಬಿನ್ ತಲಾಲ್ ಅಲ್ ಸೌದ್ ಶನಿವಾರ ನಿಧನರಾಗಿದ್ದಾರೆ. ಪ್ರಿನ್ಸ್ ಅಲ್ ವಲೀದ್ ಅವರ ಅಂತ್ಯಕ್ರಿಯೆ ಇಂದು ರಿಯಾದ್ನಲ್ಲಿ ನಡೆಯಲಿದೆ ಎಂದು ಅವರ ತಂದೆ ಪ್ರಿನ್ಸ್ ಖಾಲೀದ್ ಬಿನ್ ತಲಾಲ್ ಬಿನ್ ಅಬ್ದುಲಜೀಜ್ ತಿಳಿಸಿದ್ದಾರೆ.

1990ರ ಏಪ್ರಿಲ್ನಲ್ಲಿ ಜನಿಸಿದ ವಲೀದ್ ಅವರಿಗೆ, 2005 ರಲ್ಲಿ ಲಂಡನ್ನಲ್ಲಿ ಮಿಲಿಟರಿ ತರಬೇತಿಯ ಸಮಯದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಆ ಬಳಿಕ ಅವರು 20 ವರ್ಷಗಳ ಕಾಲ ಕೋಮಾದಲ್ಲಿದ್ದರು. ಈ ಅಪಘಾತದಲ್ಲಿ ಅವರ ಮೆದುಳಿಗೆ ತೀವ್ರ ಗಾಯಗಳು ಮತ್ತು ಆಂತರಿಕ ರಕ್ತಸ್ರಾವವಾಯಿತು.
ಸೌದಿ ಸರ್ಕಾರವು ರಾಜಕುಮಾರನಿಗೆ ಚಿಕಿತ್ಸೆ ನೀಡಲು ಅಮೆರಿಕ ಮತ್ತು ಸ್ಪೇನ್ನಿಂದ ನುರಿತ ತಜ್ಞರನ್ನು ಕರೆಸಿತ್ತು. ಆದರೆ ರಾಜಕುಮಾರನಿಗೆ ಎಂದೂ ಪ್ರಜ್ಞೆ ಮರಳಲೇ ಇಲ್ಲ. ದೇಹದಲ್ಲಿ ಚಲನೆ ಇದ್ದ ಕಾರಣ ಯಾವತ್ತೋ ಒಂದು ದಿನ ಏಳಬಹುದು ಎನ್ನುವ ಆಸೆಯಲ್ಲಿ ಕುಟುಂಬದವರಿದ್ದರು. ಆದರೆ ವೈದ್ಯರು ಅವರು ಎಂದೂ ಎದ್ದೇಳಲು ಸಾಧ್ಯವೇ ಇಲ್ಲ ಎಂದಿದ್ದರು. ಆದರೆ ಅವರ ತಂದೆ ಪ್ರಿನ್ಸ್ ಖಾಲಿದ್ ಚಿಕಿತ್ಸೆಯನ್ನು ನಿಲ್ಲಿಸಲು ಒಪ್ಪಿರಲಿಲ್ಲ.
ಬಳಿಕ ರಾಜಕುಮಾರನನ್ನು ರಿಯಾದ್ನ ಅರಮನೆಯಲ್ಲಿ ವಿಶೇಷ ಕೋಣೆಯಲ್ಲಿ ಇರಿಸಲಾಯಿತು. ವೈದ್ಯರು, ದಾದಿಯರು ಮತ್ತು ವೈದ್ಯಕೀಯ ನೆರವು ಇಲ್ಲಿ ದಿನದ 24 ಗಂಟೆಯೂ ಲಭ್ಯವಿತ್ತು. ಇನ್ನು ಪ್ರಿನ್ಸ್ ಅಲ್ ವಲೀದ್ ಅವರ ಸ್ಥಿತಿಯ ವೀಡಿಯೊಗಳು ಆಗಾಗ ಲಭ್ಯವಾಗುತ್ತಿತ್ತು. ಆದರೆ ಇದೀಗ ಪ್ರಿನ್ಸ್ ವಲೀದ್ ತಮ್ಮ 36ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.