ದುಬೈ ,ಜು. 17 (DaijiworldNews/AK): ಯುಎಇಯಲ್ಲಿ ಇರುವ ತುಳುವರಿಗೆ ಕಳೆದ ಹದಿನಾಲ್ಕು ವರ್ಷಗಳಿಂದ ಉತ್ತಮ ಸಂದೇಶದ ನಾಟಕದ ಮೂಲಕ ಮನರಂಜನೆ ನೀಡುತ್ತಿರುವ ಗಮ್ಮತ್ ಕಲಾವಿದೆರ್ ದುಬೈ ತಂಡದ ನೂತನ ನಾಟಕ ಯಶಸ್ವಿಯಾಗಿ ಪ್ರದರ್ಶನ ಕಾಣಲಿ ಹಾಗೂ ಯುಎಇಯಲ್ಲಿ ಇರುವ ಕಲಾಭಿಮಾನಿಗಳಿಗೆ ಮನರಂಜನೆ ಕೊಡುವುದಲ್ಲದೆ ಇಲ್ಲಿಯ ನಮ್ಮೂರಿನ ಕಲಾವಿದರಗೆ ಅವಕಾಶ ನೀಡುತ್ತಿರುವುದು ಪ್ರಶಂಸನೀಯ ಎಂದು ಯುಎಇ ಬಂಟ್ಸ್ ನ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ ಅಭಿಪ್ರಾಯಪಟ್ಟರು.






ಅವರು ನಗರದ ಬಿರಿಯಾನಿ 2020 ರೆಸ್ಟೋರೆಂಟ್ ನ ಸಭಾಂಗಣದಲ್ಲಿ ಗಮ್ಮತ್ ಕಲಾವಿದೆರ್ ದುಬೈ ಯುಎಇಯ ನೂತನ ನಾಟಕದ ಮುಹೂರ್ತ ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನವನ್ನು ಅಲಂಕರಿಸಿ ಮಾತನಾಡುತ್ತಿದ್ದರು.
ಗೌರವಾನ್ವಿತ ಅತಿಥಿಗಳಾಗಿ ಉಪಸ್ಥಿತರಿದ್ದವರಲ್ಲಿ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿಯವರು ಮಾತನಾಡುತ್ತಾ ಕಳೆದ ಹದಿನಾಲ್ಕು ವರ್ಷಗಳಿಂದ ಈ ತಂಡದ ನಾಟಕವನ್ನು ನೋಡುತ್ತಾ ಇದ್ದೇನೆ ವರ್ಷ ವರ್ಷಕ್ಕೆ ಉತ್ತಮ ಸಂದೇಶ ನೀಡುವ ನಾಟಕವನ್ನು ಮಾಡುತ್ತ ಇದ್ದಿರಿ. ಈ ತಂಡದ ಪ್ರತಿಯೊಬ್ಬ ಕಲಾವಿದನ ಅಭಿನಯದ ಚಾತುರ್ಯವನ್ನು ನೋಡುವಾಗ ಊರಿನ ವೃತ್ತಿಪರ ನಾಟಕ ತಂಡಕ್ಕಿಂತ ಯಾವುದೇ ಕಮ್ಮಿ ಇಲ್ಲ ಎಂದು ಶ್ಲಾಘಿಸಿ ತಂಡದ ನೂತನ ನಾಟಕಕ್ಕೆ ಶುಭವನ್ನು ಹಾರೈಸುತ್ತೇನೆ ಎಂದರು.
ಇನ್ನೋರ್ವ ಅತಿಥಿ ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾದ ಸತೀಶ್ , ಕೊಂಕಣಿ ರಂಗ ಕಲಾವಿದರು,ನಿರ್ದೇಶಕರಾದ ಡಯನಾ ಡಿ ಸೋಜಾ, ಸಭಾ ಕಾರ್ಯಕ್ರಮದಲ್ಲಿ ಪುರೋಹಿತರಾದ ಶ್ರೀ ರವಿಶಂಕರ್ ಲೋಹಿತ್ ಭಟ್, ನಿಹಾಲ್ ನ ಆಡಳಿತ ನಿರ್ದೇಶಕರಾದ ಸುಂದರ ಶೆಟ್ಟಿ ಅಬುಧಾಬಿ, ಕರ್ನಾಟಕ ಸಂಘ ದುಬೈಯ ಅಧ್ಯಕ್ಷರಾದ ಶಶಿಧರ್ ನಾಗರಾಜಪ್ಪ,ತಂಡದ ಮಹಾ ಪೋಷಕರಾದ ಹರೀಶ್ ಬಂಗೆರ ನಾಟಕ ತಂಡಕ್ಕೆ ಶುಭವನ್ನು ಹಾರೈಸಿ ತಂಡಕ್ಕೆ ನಮ್ಮ ಸಹಾಯ,ಸಹಕಾರ ನಿರಂತರವಿದೆ ಎಂದರು.
ತಂಡದ ನಿರ್ದೇಶಕರಾದ ವಿಶ್ವನಾಥ ಶೆಟ್ಟಿ ನಾಟಕದ ಬಗ್ಗೆ ಮಾತನಾಡುತ್ತಾ ಅಕ್ಟೋಬರ್ ಹನ್ನೊಂದರಂದು ಶನಿವಾರ ಸಂಜೆ ಐದು ಗಂಟೆಗೆ ಎಮಿರೇಟ್ಸ್ ಥೀಯೇಟರ್ ನಲ್ಲಿ ನಾಟಕ ಪ್ರದರ್ಶನವಾಗಲಿದೆ. ದಿನಕರ ಭಂಡಾರಿ ಕಣಂಜರುರವರ ಮೂಲಕಥೆಯಾಗಿರುವ ಜಗದೀಶ್ ಶೆಟ್ಟಿ ಕೆಂಚನಕೆರೆ ರಚಿಸಿ ಸಂಭಾಷಣೆ ಬರೆದಿರುವ "ಪೋನಗ ಕೊನೊಪರ" ನಾಟಕವನ್ನು ನನ್ನ ನಿರ್ದೇಶನಲ್ಲಿ ನಮ್ಮ ತಂಡದ ಪ್ರತಿಭಾವಂತ ಕಲಾವಿದರು ಅಭಿನಯಿಸಲಿದ್ದಾರೆ. ನಾಟಕಕ್ಕೆ ಸಂಗೀತ ನಿರ್ದೇಶನವನ್ನು ರೋಹನ್ ಲೋಬೊ ಕಳಕುಲ್ಲು ಮತ್ತು ರಂಗ- ಸಜ್ಜಿಕೆಯನ್ನು ದುಬೈ ಸೋರ್ಸ್ ನಾ ಹರೀಶ್ ಬಂಗೇರರವರು ಮಾಡಲಿದ್ದಾರೆ ಎಂದು ನಾಟಕದ ಬಗ್ಗೆ ಮಾಹಿತಿಯನ್ನು ನೀಡುತ್ತಾ ಯುಎಇಯ ತುಳುವರು ನಮ್ಮ ತಂಡಕ್ಕೆ ಆಶಿರ್ವಾದನ್ನು ನೀಡಬೇಕೆಂದು ತಿಳಿಸಿದರು.
ಸಭಾ ಕಾರ್ಯಕ್ರಮದ ಮುಂಚೆ ಪುರೋಹಿತರಾದ ಶ್ರೀ ರವಿಶಂಕರ್ ಲೋಹಿತ್ ಭಟ್ ಅವರ ಪೌರೋಹಿತ್ಯದಲ್ಲಿ ನಾಟಕದ ಮುಹೂರ್ತ ಪೂಜೆ ನಡೆಯಿತು.ಯುಎಇಯ ತುಳು ಕನ್ನಡ ಸಂಘ ಸಂಸ್ಥೆಗಳ ಪದಾಧಿಕಾರಿಗಳು,ತಂಡದ ಮಾಜಿ ಅಧ್ಯಕ್ಷರುಗಳಾದ ವಾಸು ಶೆಟ್ಟಿ, ಶ್ರೀಮತಿ ಸುವರ್ಣ ಸತೀಶ್ ಪೂಜಾರಿ, ರಾಜೇಶ್ ಕುತ್ತಾರ್, ಕೋಶಾಧಿಕಾರಿ ಜೇಶ್ ಬಾಯಾರ್ ಹಾಗೂ ತಂಡದ ಎಲ್ಲಾ ಪದಾಧಿಕಾರಿಗಳು ಕಲಾವಿದರು ಮತ್ತು ಮಾಧ್ಯಮ ಮಿತ್ರರು ಉಪಸ್ಥಿತರಿದ್ದರು.
ತಂಡದ ಅಧ್ಯಕ್ಷೆ ಶ್ರೀಮತಿ ಲವೀನಾ ಫೆರ್ನಾಂಡಿಸ್ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿದರು.ದೀಕ್ಷಾ ರೈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು, ಕಾರ್ಯದರ್ಶಿ ಶ್ರೀಮತಿ ದೀಪ್ತಿ ದಿನ್ ರಾಜ್ ಶೆಟ್ಟಿ ಧನ್ಯವಾದವಿತ್ತರು.