ವಾಷಿಂಗ್ಟನ್, ಜು. 08 (DaijiworldNews/AA): ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದ್ದಾರೆ.

ಸೋಮವಾರ ಶ್ವೇತಭವನದಲ್ಲಿ ನಡೆದ ಭೋಜನಕೂಟದ ಸಂದರ್ಭದಲ್ಲಿ, ನೆತನ್ಯಾಹು ಅವರು ನೊಬೆಲ್ ಸಮಿತಿಗೆ ಕಳುಹಿಸಿದ ನಾಮನಿರ್ದೇಶನ ಪತ್ರದ ಪ್ರತಿಯನ್ನು ಹಸ್ತಾಂತರ ಮಾಡಿದರು. "ಟ್ರಂಪ್ ಅವರು ಜಗತ್ತಿನಲ್ಲಿ ಈಗ ಶಾಂತಿ ಮಂತ್ರವನ್ನು ಜಪಿಸುತ್ತಿದ್ದಾರೆ. ವಿಶೇಷವಾಗಿ ಈಗ ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸಲು ಟ್ರಂಪ್ ಬಹಳಷ್ಟು ಶ್ರಮಿಸುತ್ತಿದ್ದಾರೆ. ಟ್ರಂಪ್ ಅವರ ಈ ಕೆಲಸಕ್ಕೆ ಎಲ್ಲಾ ಇಸ್ರೇಲಿಗಳು ಮಾತ್ರವಲ್ಲದೆ, ಯಹೂದಿ ಜನರು ಮತ್ತು ಪ್ರಪಂಚದಾದ್ಯಂತದ ಅನೇಕ ಅಭಿಮಾನಿಗಳ ಮೆಚ್ಚುಗೆ ವ್ಯಕ್ತವಾಗಿದೆ" ಎಂದು ತಿಳಿಸಿದರು.
ನೆತನ್ಯಾಹು ಅವರು ತನ್ನನ್ನು ನೊಬೆಲ್ಗೆ ನಾಮನಿರ್ದೇಶನ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ ಟ್ರಂಪ್, "ಇದು ನನಗೆ ತಿಳಿದಿರಲಿಲ್ಲ. ವಿಶೇಷವಾಗಿ ನಿಮ್ಮಿಂದ ಈ ಮಾತು ಬಂದಿರುವುದಕ್ಕೆ ತುಂಬಾ ಧನ್ಯವಾದಗಳು" ಎಂದರು.
ಭಾರತದ ಜೊತೆಗಿನ ಯುದ್ಧವನ್ನು ನಿಲ್ಲಿಸಿದ್ದಕ್ಕೆ ಇತ್ತೀಚೆಗೆ ಪಾಕಿಸ್ತಾನ ಕೂಡ ಟ್ರಂಪ್ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿತ್ತು.