ದುಬೈ, ಜೂ. 24 (DaijiworldNews/AA): ಕತಾರ್ನಲ್ಲಿರುವ ಅಮೆರಿಕ ವಾಯುನೆಲೆಯ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೆ ಮುನ್ನೆಚ್ಚರಿಕಾ ಕ್ರಮವಾಗಿ ಜೂನ್ 23 ರಂದು ತಾತ್ಕಾಲಿಕವಾಗಿ ಮುಚ್ಚಲಾಗಿದ್ದ ಗಲ್ಫ್ ರಾಷ್ಟ್ರಗಳಾದ ಕತಾರ್, ಬಹ್ರೇನ್ ಮತ್ತು ಕುವೈತ್ ತಮ್ಮ ವಾಯುಪ್ರದೇಶವನ್ನು ಪುನಃ ತೆರೆದಿವೆ.

ತಾತ್ಕಾಲಿಕವಾಗಿ ಮುಚ್ಚಲಾಗಿದ್ದ ವಾಯುಪ್ರದೇಶವನ್ನು ಪುನಃ ತೆರೆದಿದ್ದು, ದುಬೈ ವಿಮಾನ ನಿಲ್ದಾಣಗಳಲ್ಲಿ ವಿಮಾನ ಕಾರ್ಯಾಚರಣೆಗಳು ಪೂರ್ಣ ಸಾಮರ್ಥ್ಯದಲ್ಲಿ ಪುನರಾರಂಭಗೊಂಡಿವೆ ಎಂದು ದುಬೈ ವಿಮಾನ ನಿಲ್ದಾಣಗಳು ದೃಢಪಡಿಸಿವೆ. ಇತ್ತೀಚೆಗೆ ಇರಾನ್ ಮೇಲೆ ಬಾಂಬ್ ದಾಳಿ ನಡೆಸಿದ್ದ ಅಮೆರಿಕದ ವಿರುದ್ಧ ಇರಾನ್ ಪ್ರತಿದಾಳಿ ನಡೆಸಿತ್ತು. ಹೀಗಾಗಿ ಹೆಚ್ಚಿದ ಉದ್ವಿಗ್ನತೆಯ ಮಧ್ಯೆ ವಿಮಾನ ಕಾರ್ಯಾಚರಣೆಗಳನ್ನು ನಿಲ್ಲಿಸಲಾಗಿತ್ತು.
"ದುಬೈ ವಿಮಾನ ನಿಲ್ದಾಣಗಳು ಅನುಮೋದಿತ ವೇಳಾಪಟ್ಟಿಗಳನ್ನು ನಿರ್ವಹಿಸಲು ವಿಮಾನಯಾನ ಸಂಸ್ಥೆಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದರೂ, ಕೆಲವು ವಿಳಂಬಗಳು ಅಥವಾ ರದ್ದತಿಗಳು ಇನ್ನೂ ಸಂಭವಿಸಬಹುದು. ಇತ್ತೀಚಿನ ನವೀಕರಣಗಳಿಗಾಗಿ ಪ್ರಯಾಣಿಕರು ತಮ್ಮ ವಿಮಾನಯಾನ ಸಂಸ್ಥೆಗಳೊಂದಿಗೆ ಪರಿಶೀಲಿಸಲು ಸೂಚಿಸಲಾಗಿದೆ" ಎಂದು ದುಬೈ ಮಾಧ್ಯಮ ಕಚೇರಿ ಹೇಳಿದೆ.
"ಈ ಸಮಯದಲ್ಲಿ ನಮ್ಮ ಪ್ರಯಾಣಿಕರು ಮನೆಗೆ ಮರಳಲು, ಅವರ ಮುಂದಿನ ಪ್ರಯಾಣವನ್ನು ಸುರಕ್ಷಿತವಾಗಿ ಮತ್ತು ಸರಾಗವಾಗಿ ತಲುಪಲು ಸಹಾಯ ಮಾಡುವುದು ನಮ್ಮ ಗುರಿಯಾಗಿದೆ. ಕಾರ್ಯಾಚರಣೆಗಳು ಪುನರಾರಂಭಗೊಳ್ಳುತ್ತಿದ್ದಂತೆ, ನಮ್ಮ ವಿಮಾನದ ವೇಳಾಪಟ್ಟಿಯಲ್ಲಿ ವಿಳಂಬವಾಗಬಹುದು. ಹೆಚ್ಚಿನ ಮಾಹಿತಿಗೆ ಪ್ರಯಾಣಿಕರು ವೆಬ್ ಸೈಟ್ ಪರಿಶೀಲಿಸಬಹುದು" ಎಂದು ಖತರ್ ಏರ್ ವೇಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.