ವಾಷಿಂಗ್ಟನ್, ಜೂ. 15 (DaijiworldNews/AA): ಇಸ್ರೇಲ್ ನಡೆಸಿದ ವಾಯುದಾಳಿಗೂ ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ. ಒಂದು ವೇಳೆ ಇರಾನ್ ಅಮೆರಿಕದ ಮೇಲೆ ದಾಳಿ ಮಾಡಿದ್ರೆ, ಹಿಂದೆಂದೂ ನೋಡಿರದ ಮಟ್ಟದಲ್ಲಿ ನಮ್ಮ ಮಿಲಿಟರಿ ಬಲವನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಇಸ್ರೇಲ್ ನೆರವಿಗೆ ಬಂದರೆ ನಿಮ್ಮ ನೌಕಾನೆಲೆಗಳನ್ನು ಧ್ವಂಸಗೊಳಿಸ್ತೇವೆ ಎಂದು ಇರಾನ್ ಎಚ್ಚರಿಕೆ ನೀಡಿತ್ತು. ಇದರ ಬೆನ್ನಲ್ಲೇ, ಇರಾನ್ನ ಅಣ್ವಸ್ತ್ರ ಮತ್ತು ಮಿಲಿಟರಿ ನೆಲೆಗಳ ಮೇಲಿನ ಇಸ್ರೇಲ್ ದಾಳಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಇರಾನ್ ನಮ್ಮ ಮೇಲೆ ಯಾವುದೇ ರೀತಿಯಲ್ಲಿ ದಾಳಿ ಮಾಡಿದ್ರೆ ಅಮೆರಿಕದ ಪಡೆಗಳ ಸಂಪೂರ್ಣ ಶಕ್ತಿ ಅಲ್ಲಿ ಬಂದಿಳಿಯಲಿದೆ. ಹಿಂದೆಂದೂ ನೋಡಿರದ ಮಟ್ಟದಲ್ಲಿ ಸೇನಾ ಬಲವನ್ನು ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ವಾರ್ನಿಂಗ್ ನೀಡಿದ್ದಾರೆ.
ಒಂದು ಕಾಲದಲ್ಲಿ ಇರಾನ್ ಸಾಮ್ರಾಜ್ಯ ಎಂದು ಕರೆಯಲ್ಪಡುತ್ತಿತ್ತು, ಈಗ ಅವರಲ್ಲಿ ಏನೂ ಉಳಿದಿಲ್ಲ. ಇರಾನ್ನ ಪರಿಸ್ಥಿತಿ ಕುರಿತಂತೆ ರಾಷ್ಟ್ರೀಯ ಭದ್ರತಾ ತಂಡದ ಜೊತೆ ಮಾತುಕತೆ ನಡೆಸಿದ್ದೇನೆ. ದಾಳಿಯಲ್ಲಿ ನಮ್ಮ ದೇಶದ ಯಾವುದೇ ಪಾತ್ರವಿಲ್ಲ. ಆದರೆ, ಇರಾನ್ ಮೇಲಿನ ದಾಳಿಗೆ ಅಮೆರಿಕದ ಶಸ್ತ್ರಾಸ್ತ್ರಗಳನ್ನು ಇಸ್ರೇಲ್ ಬಳಸಿಕೊಂಡಿದೆ ತಿಳಿಸಿದ್ದಾರೆ.
ಇನ್ನಷ್ಟು ವಿನಾಶವಾಗುವ ಮುನ್ನ ಇರಾನ್ ಒಪ್ಪಂದಕ್ಕೆ ಬರಲು ಮತ್ತೊಂದು ಅವಕಾಶವಿದೆ. ಇರಾನ್ ಮತ್ತು ಇಸ್ರೇಲ್ ನಡುವೆ ಸುಲಭವಾಗಿ ಒಪ್ಪಂದ ಮಾಡಿಕೊಳ್ಳಬಹುದು. ಜೊತೆಗೆ ಈ ರಕ್ತಸಿಕ್ತ ಸಂಘರ್ಷವನ್ನು ಕೊನೆಗೊಳಿಸಬಹುದು. ಇರಾನ್ ತನ್ನ ಪರಮಾಣು ಯೋಜನೆಗಳನ್ನು ಸ್ಥಗಿತಗೊಳಿಸುವ ಸಂಬಂಧ ಶೀಘ್ರ ಒಪ್ಪಂದಕ್ಕೆ ಬರುವಂತೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಒತ್ತಾಯಿಸಿದ್ದಾರೆ.