ಲಂಡನ್, ಜೂ. 03 (DaijiworldNews/AA): ಆರ್ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ತಂಡದ ನಡುವೆ ಐಪಿಎಲ್ ಫೈನಲ್ ಪಂದ್ಯ ನಡೆಯಲಿದ್ದು, ಈ ಎರಡು ತಂಡಗಳು ಚೊಚ್ಚಲ ಟ್ರೋಫಿಗಾಗಿ ಸೆಣಸಲಿವೆ. ಈ ನಡುವೆ ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ಅವರು ಆರ್ಸಿಬಿ ತಂಡಕ್ಕೆ ಬೆಂಬಲ ಘೋಷಿಸಿದ್ದಾರೆ.

ಭಾರತ ಭೇಟಿಯ ಸಂದರ್ಭದಲ್ಲಿ ಮಾತನಾಡಿದ್ದ ಸುನಕ್ ಅವರು, ಆರ್ಸಿಬಿಯೊಂದಿಗಿನ ನನ್ನ ಬಾಂಧವ್ಯ ಕುಟುಂಬದ ಮೂಲಕ ಶುರುವಾಯಿತು. ನಾನು ಬೆಂಗಳೂರಿನ ಕುಟುಂಬದಾಕೆಯನ್ನು ಮದುವೆಯಾಗಿದ್ದೇನೆ. ಆದ್ದರಿಂದ ಆರ್ಸಿಬಿ ನನ್ನ ತಂಡ ಎಂದು ತಿಳಿಸಿದ್ದರು.
ಸುನಕ್, ತಮ್ಮ ಅತ್ತೆ-ಮಾವ ಅವರಿಂದ ಮದುವೆಯ ಉಡುಗೊರೆಯಾಗಿ ಆರ್ಸಿಬಿ ಜೆರ್ಸಿಯನ್ನು ಪಡೆದಿದ್ದರು. ಅಂದಿನಿಂದ ಆರ್ಸಿಬಿ ತಂಡವನ್ನು ಅನುಸರಿಸುತ್ತಿದ್ದಾರೆ. 'ನಾವು ಬಹಳ ಹಿಂದೆಯೇ ಪಂದ್ಯಗಳಿಗೆ ಹೋಗುತ್ತಿದ್ದೆವು. ನಾನು ಕಚೇರಿಯಲ್ಲಿದ್ದಾಗಲೂ ಸಹ, ಮ್ಯಾಚ್ ವೇಳೆ ಆರ್ಸಿಬಿ ತಂಡವನ್ನು ಹುರಿದುಂಬಿಸುತ್ತಿದ್ದೆ' ಎಂದು ನೆನಪಿಸಿಕೊಂಡಿದ್ದಾರೆ.
ಇನ್ನು ಆರ್ಸಿಬಿ ತಂಡದ ಇಂಗ್ಲಿಷ್ ಆಟಗಾರರು ಕೂಡ ದೊಡ್ಡ ಪಾತ್ರ ವಹಿಸುತ್ತಾರೆ. ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್ಸ್ಟೋನ್ ಫೈನಲ್ನಲ್ಲಿ ದೊಡ್ಡ ಕೊಡುಗೆ ನೀಡುತ್ತಾರೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.