ವಾಷಿಂಗ್ಟನ್, ಏ.28 (DaijiworldNews/AA): 2 ದೋಣಿಗಳು ಮುಖಾಮುಖಿ ಢಿಕ್ಕಿಯಾಗಿ, ಓರ್ವ ಸಾವನ್ನಪ್ಪಿ ಹಲವಾರು ಮಂದಿ ಗಾಯಗೊಂಡಿರುವ ಘಟನೆ ಅಮೆರಿಕದ ಫ್ಲೋರಿಡಾದಲ್ಲಿನ ಕ್ಲಿಯರ್ವಾಟರ್ ನಗರದ ಮೆಮೋರಿಯಲ್ ಕಾಸ್ವೇ ಸೇತುವೆಯ ಬಳಿ ಸಂಭವಿಸಿದೆ.

ಇಬ್ಬರು ಸಿಬ್ಬಂದಿ ಸೇರಿದಂತೆ 45 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿಗೆ ಇನ್ನೊಂದು ದೋಣಿ ಮುಖಾಮುಖಿ ಢಿಕ್ಕಿಯಾಗಿದೆ. ಢಿಕ್ಕಿ ಹೊಡೆದ ಇನ್ನೊಂದು ದೋಣಿಯು ಘಟನಾ ಸ್ಥಳದಿಂದ ನಾಪತ್ತೆಯಾಗಿದೆ. ರಾತ್ರಿ 10 ಗಂಟೆ ಸುಮಾರಿಗೆ 2 ದೋಣಿಗಳು ಮುಖಾಮುಖಿ ಡಿಕ್ಕಿ ಹೊಡೆದ ನಂತರ ಸೇತುವೆಯ ದಕ್ಷಿಣ ದಡದಲ್ಲಿ ಬಂದು ನಿಂತಿತು. ಆ ಕೂಡಲೇ ಗಾಯಾಳುಗಳನ್ನು ಹೊರತೆಗೆಯಲಾಯಿತು ಎಂದು ಮೂಲಗಳಿಂದ ತಿಳಿದುಬಂದಿದೆ.
ಈ ಅವಘಡದಲ್ಲಿ ಓರ್ವ ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಢಿಕ್ಕಿ ಹೊಡೆದು ಪರಾರಿಯಾದ ಮತ್ತೊಂದು ದೋಣಿಯ ಬಗ್ಗೆ ಮಾಹಿತಿ ದೊರೆತಿಲ್ಲ. ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.