ಇಸ್ಲಮಾಬಾದ್, ಏ.24 (DaijiworldNews/AA): ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತ್ಯುತ್ತರವಾಗಿ ಭಾರತ ಪಾಕಿಸ್ತಾನಕ್ಕೆ ರಾಜತಾಂತ್ರಿಕ ಮಾರ್ಗದ ಮೂಲಕ ತಿರುಗೇಟು ನೀಡಿತ್ತು. ಭಾರತ ತೆಗೆದುಯಕೊಂಡ ಹಲವು ಕ್ರಮಗಳ ಪ್ರತಿಯಾಗಿ ಪಾಕಿಸ್ತಾನ ಕೂಡ ಇಂದು ಕೆಲವು ನಿರ್ಣಯಗಳನ್ನು ತೆಗೆದುಕೊಂಡಿದೆ.

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಇಂದು ರಾಷ್ಟ್ರೀಯ ಭದ್ರತಾ ಸಮಿತಿ (ಎನ್ಎಸ್ಸಿ) ಸಭೆಯನ್ನು ನಡೆಸಿದರು. ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಉನ್ನತ ನಾಗರಿಕ ಮತ್ತು ಮಿಲಿಟರಿ ನಾಯಕತ್ವ ಭಾಗವಹಿಸಿದ್ದರು. ಸಭೆಯಲ್ಲಿ ಎಲ್ಲಾ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಪಾಕಿಸ್ತಾನಿ ವಾಯುಪ್ರದೇಶವನ್ನು ನಿರ್ಬಂಧಿಸುವುದು ಮತ್ತು ವಾಘಾ ಗಡಿಯನ್ನು ಮುಚ್ಚುವುದು ಸೇರಿದಂತೆ ಪ್ರಮುಖ ನಿರ್ಧಾರ ತೆಗೆದುಕೊಳ್ಳಲಾಯಿತು.
ಜೊತೆಗೆ ಇಸ್ಲಾಮಾಬಾದ್ನಲ್ಲಿರುವ ಭಾರತೀಯ ಹೈಕಮಿಷನ್ನ ಬಲವನ್ನು 30 ರಾಜತಾಂತ್ರಿಕರು ಮತ್ತು ಸಿಬ್ಬಂದಿ ಸದಸ್ಯರಿಗೆ ಇಳಿಸಲಾಗುವುದು ಎಂದು ಪಾಕಿಸ್ತಾನ ಸರ್ಕಾರ ದೃಢಪಡಿಸಿದೆ. ಪಾಕಿಸ್ತಾನದ ಪ್ರಧಾನಿ ಸಚಿವಾಲಯ ನೀಡಿರುವ ಪತ್ರಿಕಾ ಪ್ರಕಟಣೆಯಲ್ಲಿ, ಇಸ್ಲಾಮಾಬಾದ್ನಲ್ಲಿರುವ ಭಾರತೀಯ ಹೈಕಮಿಷನ್ನ ಬಲವನ್ನು ಏಪ್ರಿಲ್ 30, 2025ರಿಂದ ಜಾರಿಗೆ ಬರುವಂತೆ 30 ರಾಜತಾಂತ್ರಿಕರು ಮತ್ತು ಸಿಬ್ಬಂದಿ ಸದಸ್ಯರಿಗೆ ಇಳಿಸಲಾಗುವುದು. ಪಾಕಿಸ್ತಾನದ ಮೂಲಕ ಯಾವುದೇ ಮೂರನೇ ದೇಶಕ್ಕೆ ಮತ್ತು ಅಲ್ಲಿಂದ ಭಾರತಕ್ಕೆ ಬರುವ ಎಲ್ಲಾ ವ್ಯಾಪಾರವನ್ನು ಸ್ಥಗಿತಗೊಳಿಸಲಾಗಿದೆ ಎನ್ನಲಾಗಿದೆ.
ಭಾರತದ ಸಿಖ್ ಧರ್ಮೀಯರು 24 ಗಂಟೆಯೊಳಗೆ ಪಾಕ್ ತೊರೆಯಬೇಕು ಎಂದು ಪಾಕಿಸ್ತಾನ ಆದೇಶ ಹೊರಡಿಸಿದೆ. ಇಸ್ಲಾಮಾಬಾದ್ನಲ್ಲಿರುವ ಭಾರತೀಯ ರಕ್ಷಣಾ, ನೌಕಾ ಪಡೆ, ವಾಯಪಡೆ ಸಲಹೆಗಾರರು ಪಾಕಿಸ್ತಾನ ತೊರೆಯಬೇಕು ಎಂದು ಸೂಚಿಸಲಾಗಿದೆ. ಭಾರತೀಯ ರಾಯಭಾರಿ ಕಚೇರಿ ಸಿಬ್ಬಂದಿ ಸಂಖ್ಯೆಯನ್ನು ೩೦ಕ್ಕೆ ಇಳಿಸಲು ನಿರ್ದೇಶಿಸಿದೆ.
ಇನ್ನು ಪಹಲ್ಗಾಮ್ ಉಗ್ರರ ದಾಳಿಯ ಬಗ್ಗೆ ಭಾರತದ ಆರೋಪಗಳನ್ನು 'ರಾಜಕೀಯ ಪ್ರೇರಿತ' ಮತ್ತು 'ಕಾನೂನುಬಾಹಿರ' ಎಂದು ಪಾಕಿಸ್ತಾನ ಆರೋಪಿಸಿದೆ. ಸಿಖ್ ಯಾತ್ರಿಕರನ್ನು ಹೊರತುಪಡಿಸಿ ಭಾರತೀಯ ಪ್ರಜೆಗಳಿಗೆ ಎಲ್ಲಾ SAARC ವೀಸಾಗಳನ್ನು ಅಮಾನತುಗೊಳಿಸಲಾಗಿದೆ. ವಾಘಾ ಗಡಿಯನ್ನು ಮುಚ್ಚಲಾಗಿದೆ. ಭಾರತೀಯ ರಕ್ಷಣಾ, ನೌಕಾ ಮತ್ತು ವಾಯು ಸಲಹೆಗಾರರನ್ನು ಪರ್ಸನಾ ನಾನ್ ಗ್ರಾಟಾ ಎಂದು ಪಾಕಿಸ್ತಾನ ಘೋಷಿಸಿದೆ.