ನ್ಯೂಯಾರ್ಕ್, ಏ.15 (DaijiworldNews/AK): ಹಡ್ಸನ್ ನದಿಯಲ್ಲಿ ಹೆಲಿಕಾಪ್ಟರ್ ಪತನವಾಗಿ 6 ಮಂದಿ ದುರಂತ ಸಾವಿಗೀಡಾದ ಬೆನ್ನಲ್ಲೇ ಅಪಘಾತಕ್ಕೆ ಕಾರಣವಾದ ಹೆಲಿಕಾಪ್ಟರ್ ಟೂರ್ಸ್ ಕಂಪನಿಯ ಬಾಗಿಲು ಮುಚ್ಚಲ್ಪಟ್ಟಿದೆ.

ಗುರುವಾರ ನ್ಯೂಯಾರ್ಕ್ ಹೆಲಿಕಾಪ್ಟರ್ ಟೂರ್ಸ್ ನಿರ್ವಹಿಸುತ್ತಿದ್ದ ಹೆಲಿಕಾಪ್ಟರ್ ಅಸಮರ್ಪಕವಾಗಿ ಕಾರ್ಯನಿರ್ವಹಿಸಿ ಹಡ್ಸನ್ ನದಿಗೆ ಬಿದ್ದಾಗ, ಖ್ಯಾತ ಎಂಎನ್ಸಿ ಕಂಪನಿಯ ಸಿಇಒ, ಅವರ ಪತ್ನಿ ಮತ್ತು ಮೂವರು ಮಕ್ಕಳು ಪೈಲಟ್ ಜೊತೆಗೆ ಸಾವನ್ನಪ್ಪಿದ್ದರು. ಆ ಕುಟುಂಬವು ಮ್ಯಾನ್ಹ್ಯಾಟನ್ ಮೇಲೆ ಪ್ರವಾಸೋದ್ಯಮ ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸುತ್ತಿತ್ತು.
ಘಟನೆ ಬಳಿಕ ನ್ಯೂಯಾರ್ಕ್ ಹೆಲಿಕಾಪ್ಟರ್ ಟೂರ್ಸ್ ತನ್ನ ಕಾರ್ಯಾಚರಣೆಗಳನ್ನು ತಕ್ಷಣವೇ ಸ್ಥಗಿತಗೊಳಿಸುತ್ತಿದೆ ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್ಎಎ) ಎಕ್ಸ್ನಲ್ಲಿ ಪೋಸ್ಟ್ ಹಾಕಿ ತಿಳಿಸಿದೆ.
FAA ಪ್ರವಾಸ ನಿರ್ವಾಹಕರ ಪರವಾನಗಿ ಮತ್ತು ಸುರಕ್ಷತಾ ದಾಖಲೆಯ ತಕ್ಷಣದ ಪರಿಶೀಲನೆಯನ್ನು ಪ್ರಾರಂಭಿಸಲಿದೆ ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ. ಅಪಘಾತಕ್ಕೆ ಕಾರಣ ಏನೆಂದು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ತನಿಖೆ ನಡೆಸುತ್ತಿದೆ.