ಚೆನ್ನೈ, ಅ.02 (DaijiworldNews/AA): ಸಿನಿಮಾ ನೋಡಿ ತಮ್ಮ ತಂದೆ ವಿಜಯ್ ಖಂಡಿತವಾಗಿಯೂ ಹೆಮ್ಮೆಪಡುತ್ತಾರೆ ಎಂದು ತಮಿಳುನಾಡಿನ ಮುಖ್ಯಮಂತ್ರಿ ಹಾಗೂ ಖ್ಯಾತ ನಟ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜೇಸನ್ ಸಂಜಯ್ ಅವರ ಚೊಚ್ಚಲ ನಿರ್ದೇಶನದ ಸಿಗ್ಮಾ ಚಿತ್ರ ಇಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಈ ಬಗ್ಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, "ವಿಜಯ್ ಅವರು ತಕ್ಷಣವೇ ಯಾವುದೇ ವಿಷಯಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ. ಅವರು ಯಾವುದೇ ವಿಷಯವನ್ನು ಸುಮ್ಮನೆ ಆಲಿಸಿ ಆಳವಾಗಿ ಆಲೋಚಿಸುತ್ತಾರೆ. ಫೋನ್ನಲ್ಲಿ ಮಾತನಾಡುವಾಗಲೂ ಉತ್ತರ ನೀಡಲು ಸಮಯ ತೆಗೆದುಕೊಳ್ಳುತ್ತಾರೆ. ಕೆಲವೊಮ್ಮೆ ಕಾಲ್ ಕಟ್ ಆಯಿತೇನೋ ಎಂದು ಪರಿಶೀಲಿಸಬೇಕಾಗುತ್ತದೆ" ಎಂದಿದ್ದಾರೆ.
"ತಂದೆಗೆ ಚಿತ್ರವನ್ನು ವಿಶ್ಲೇಷಿಸಲು ಸಮಯ ಬೇಕಾಗುತ್ತದೆ . ಹೀಗಾಗಿ ಸಿನಿಮಾ ವೀಕ್ಷಿಸಿದ ತಕ್ಷಣ ವಿಜಯ್ ಯಾವುದೇ ಅಭಿಪ್ರಾಯ ಹೇಳದಿರಬಹುದು. ಆದರೆ ಸಂಪೂರ್ಣವಾಗಿ ಸಿನಿಮಾ ನೋಡಿದ ಮೇಲೆ ಅವರಿಗೆ ಚಿತ್ರ ಖಂಡಿತ ಇಷ್ಟವಾಗುತ್ತದೆ. ಮಗನ ಕೆಲಸದ ಬಗ್ಗೆ ಅವರಿಗೆ ಹೆಮ್ಮೆಯಾಗುತ್ತದೆ ಎಂಬ ನಂಬಿಕೆ ತಮಗಿದೆ" ಎಂದು ಹೇಳಿದ್ದಾರೆ.
"ಚಿತ್ರರಂಗಕ್ಕೆ ಬರುವ ತಮ್ಮ ನಿರ್ಧಾರಕ್ಕೆ ತಂದೆಯೇ ಮೊದಲ ಬೆಂಬಲ ನೀಡಿದ್ದರು. ಮೂರು ದಶಕಗಳ ಕಾಲ ಚಿತ್ರರಂಗದಲ್ಲಿದ್ದ ಅವರಿಗೆ ಈ ಕ್ಷೇತ್ರಕ್ಕೆ ಬರುವುದರ ಮಹತ್ವ ಚೆನ್ನಾಗಿ ತಿಳಿದಿತ್ತು. ತಮ್ಮ ತಾಯಿ ಮತ್ತು ತಂಗಿಗಿಂತ ಮುಂಚಿತವಾಗಿಯೇ ತಂದೆ ಈ ನಿರ್ಧಾರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದರು" ಎಂದು ತಿಳಿಸಿದ್ದಾರೆ.