ಮುಂಬೈ, ಸೆ.19 (DaijiworldNews/AA): ನೂಕು ನುಗ್ಗಲಿನ ಅಭಿಮಾನಿಯೊಬ್ಬರ ಮೇಲೆ ಕಾರು ಹರಿದಿದ್ದಕ್ಕೆ ತನ್ನ ಚಾಲಕನ ಮೇಲೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಗರಂ ಆಗಿದ್ದಾರೆ.

ಗಣೇಶೋತ್ಸವ ಅಂಗವಾಗಿ ರಾಜಕಾರಣಿ ಆಶಿಶ್ ಶೆಲಾರ್ ಅವರ ನಿವಾಸಕ್ಕೆ ಗಣಪತಿ ದರ್ಶನಕ್ಕಾಗಿ ತೆರಳಿದ್ದರು. ಗಣೇಶೋತ್ಸವದ ಕಾರ್ಯಕ್ರಮ ಮುಗಿಸಿ ಸಲ್ಮಾನ್ ಖಾನ್ ಹೊರಬರುತ್ತಿದ್ದಂತೆ, ಅವರನ್ನು ಹತ್ತಿರದಿಂದ ನೋಡಲು ಹಾಗೂ ಫೋಟೋ ಕ್ಲಿಕ್ಕಿಸಿಕೊಳ್ಳಲು ಫ್ಯಾನ್ಸ್ ಮುಗಿಬಿದ್ದಿದ್ದಾರೆ.
ಆರಂಭದಲ್ಲಿ ಸಲ್ಮಾನ್ ಖಾನ್ ಕೈಮುಗಿದು ದಾರಿ ಬಿಡುವಂತೆ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ. ಆದರೆ ಪರಿಸ್ಥಿತಿ ಹದಗೆಟ್ಟಾಗ, ಭದ್ರತಾ ಸಿಬ್ಬಂದಿಯ ನೆರವಿನಿಂದ ಕಾರಿನೊಳಗೆ ಕುಳಿತಿದ್ದಾರೆ. ಈ ವೇಳೆ ಚಾಲಕ ಕಾರನ್ನು ಮುಂದೆ ಚಲಾಯಿಸಲು ಯತ್ನಿಸಿದಾಗ, ಅಭಿಮಾನಿಯೊಬ್ಬರ ಕಾಲು ಕಾರಿನ ಚಕ್ರದ ಅಡಿಗೆ ಸಿಲುಕಿಕೊಂಡಿದೆ.
ನೋವಿನಿಂದ ಆ ಅಭಿಮಾನಿ ಕಿರುಚಾಡಿದಾಗ ಹಾಗೂ ಅಲ್ಲಿದ್ದ ಫೋಟೋಗ್ರಾಫರ್ಗಳು ಕಾರನ್ನು ಸ್ವಲ್ಪ ಹಿಂದೆ ತೆಗೆಯುವಂತೆ ಹೇಳಿದ್ದಾರೆ. ಇದನ್ನು ಕಂಡು ಕೋಪಗೊಂಡ ಸಲ್ಮಾನ್ ಖಾನ್ ಅವರು ಕಾರಿನಲ್ಲೇ ಕುಳಿತು ಚಾಲಕನ ಕೈಗೆ ಹೊಡೆದು, ಗದರಿದ್ದಾರೆ. ತಕ್ಷಣವೇ ಕಾರನ್ನು ಜನರಿಂದ ದೂರ ಒಯ್ಯುವಂತೆ ಚಾಲಕನಿಗೆ ಸೂಚಿಸಿದ್ದಾರೆ.
ಸಲ್ಮಾನ್ ಖಾನ್ ತಮ್ಮ ಚಾಲಕನಿಗೆ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ನು ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.