ಬೆಂಗಳೂರು, ಸೆ. 07 (DaijiworldNews/TA): ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ ಕನ್ನಡ ಸೀಸನ್ 13 ಅದ್ಧೂರಿಯಾಗಿ ಆರಂಭಗೊಂಡಿದೆ. ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮದಲ್ಲಿ ಒಬ್ಬೊಬ್ಬರಾಗಿ ಸ್ಪರ್ಧಿಗಳು ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು, ಈ ಬಾರಿ ಸಿನಿಮಾ, ಕಿರುತೆರೆ, ಮಾಡೆಲಿಂಗ್, ರಂಗಭೂಮಿ ಹಾಗೂ ಸೋಷಿಯಲ್ ಮೀಡಿಯಾ ಕ್ಷೇತ್ರದ ಹಲವು ಪರಿಚಿತ ಮುಖಗಳು ಮನೆಯೊಳಗೆ ಕಾಲಿಟ್ಟಿದ್ದಾರೆ.

ಕಿಚ್ಚ ಸುದೀಪ್ ಅವರೊಂದಿಗೆ ವೇದಿಕೆ ಹಂಚಿಕೊಂಡ ಸ್ಪರ್ಧಿಗಳು ತಮ್ಮ ವ್ಯಕ್ತಿತ್ವ, ವೃತ್ತಿಜೀವನ ಹಾಗೂ ಬಿಗ್ಬಾಸ್ ಆಟದ ಬಗ್ಗೆ ಮಾತನಾಡಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಕೆಲವರು ವಿಭಿನ್ನ ಟಾಸ್ಕ್ಗಳ ಮೂಲಕ ಮನೆಯೊಳಗೆ ಪ್ರವೇಶಿಸಿದರೆ, ಇನ್ನು ಕೆಲವರು ತಮ್ಮದೇ ಸ್ಟೈಲ್ನಲ್ಲಿ ಗ್ರ್ಯಾಂಡ್ ಎಂಟ್ರಿ ನೀಡಿದ್ದಾರೆ.
ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟ 16 ಸ್ಪರ್ಧಿಗಳು :
1. ಜಗ್ಗ ಮಮ್ಮಿ ಅಲಿಯಾಸ್ ಜಗದೀಶ್ : ತಮ್ಮದೇ ಆದ ಮಾತಿನ ಶೈಲಿ ಹಾಗೂ ವಿಭಿನ್ನ ವ್ಯಕ್ತಿತ್ವದಿಂದ ಗಮನ ಸೆಳೆದಿರುವ ಜಗದೀಶ್ ಈ ಬಾರಿ ಬಿಗ್ಬಾಸ್ ಮನೆಯ ಸ್ಪರ್ಧಿಯಾಗಿದ್ದಾರೆ.
2. ಸೌಂದರ್ಯ ಶೆಟ್ಟಿ: ಮಂಗಳೂರಿನ ಮೂಲದ ಸೌಂದರ್ಯ ಶೆಟ್ಟಿ ಮಾಡೆಲಿಂಗ್ ಹಾಗೂ ಮನರಂಜನಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಗ್ಲಾಮರಸ್ ಲುಕ್ ಹಾಗೂ ವಿಭಿನ್ನ ವ್ಯಕ್ತಿತ್ವದೊಂದಿಗೆ ಅವರು ಬಿಗ್ಬಾಸ್ ಮನೆಗೆ ಕಾಲಿಟ್ಟಿದ್ದಾರೆ.
3. ಅವಿನಾಶ್ ಶತಮರ್ಷನ : ಕನ್ನಡ ಚಿತ್ರರಂಗ ಹಾಗೂ ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಅವಿನಾಶ್ ಶತಮರ್ಷನ ಯುವ ನಟ, ನಿರ್ದೇಶಕ ಹಾಗೂ ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಬಿಗ್ಬಾಸ್ ಮನೆಯಲ್ಲಿ ತಮ್ಮದೇ ಶೈಲಿಯ ಆಟ ಪ್ರದರ್ಶಿಸಲು ಸಜ್ಜಾಗಿದ್ದಾರೆ.
4. ಪ್ರಥಮಾ ಪ್ರಸಾದ್ : ಹಿರಿಯ ನಟಿ ವಿನಯಾ ಪ್ರಸಾದ್ ಅವರ ಪುತ್ರಿ ಪ್ರಥಮಾ ಪ್ರಸಾದ್ ಕಿರುತೆರೆಯಲ್ಲಿ ಪರಿಚಿತ ಮುಖ. ಇದೀಗ ಅವರು ಬಿಗ್ಬಾಸ್ ಮನೆಯ ಆಟಕ್ಕೆ ಎಂಟ್ರಿ ಕೊಟ್ಟಿದ್ದಾರೆ.
5. ಗಗನ್ ಚಿನ್ನಪ್ಪ : ‘ಮಂಗಳಗೌರಿ ಮದುವೆ’, ‘ಸೀತಾರಾಮ ಕಲ್ಯಾಣ’ ಸೇರಿದಂತೆ ಧಾರಾವಾಹಿಗಳ ಮೂಲಕ ಮನೆಮಾತಾಗಿರುವ ಗಗನ್ ಚಿನ್ನಪ್ಪ, ಬಿಗ್ಬಾಸ್ ಮನೆಯಲ್ಲಿ ಸಖತ್ ಮನರಂಜನೆ ನೀಡುವ ಭರವಸೆ ನೀಡಿದ್ದಾರೆ.
6. ಸಂಗೀತಾ ಭಟ್ : ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಸಂಗೀತಾ ಭಟ್ ಕೂಡ ಬಿಗ್ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಅವರ ಆಟ ಹೇಗಿರಲಿದೆ ಎಂಬ ಕುತೂಹಲ ಪ್ರೇಕ್ಷಕರಲ್ಲಿದೆ.
7. ಕಾವ್ಯ ಗೌಡ : ‘ಭಾಗ್ಯಲಕ್ಷ್ಮೀ’ ಧಾರಾವಾಹಿಯ ‘ಶ್ರೇಷ್ಠಾ’ ಪಾತ್ರದ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಚಿರಪರಿಚಿತರಾಗಿರುವ ಕಾವ್ಯ ಗೌಡ ಈ ಬಾರಿ ಬಿಗ್ಬಾಸ್ ಸ್ಪರ್ಧಿಯಾಗಿದ್ದಾರೆ.
8. ಓಂ ಪ್ರಕಾಶ್ : ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಓಂ ಪ್ರಕಾಶ್ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇದು ಅವರ ಎರಡನೇ ಬಿಗ್ಬಾಸ್ ಪ್ರವೇಶವಾಗಿದೆ ಎಂದು ತಿಳಿಸಲಾಗಿದೆ.
9. ಕಿರಣ್ ಶಾಸ್ತ್ರಿ : ಉತ್ತರ ಕರ್ನಾಟಕದ ಜವಾರಿ ಮಾತು, ನೇರ ನುಡಿ ಹಾಗೂ ವಿಭಿನ್ನ ವ್ಯಕ್ತಿತ್ವದಿಂದ ಗಮನ ಸೆಳೆದಿರುವ ಕಿರಣ್ ಶಾಸ್ತ್ರಿ, ‘ಅಗ್ನಿಪರೀಕ್ಷೆ’ಯಲ್ಲಿ ಗೆದ್ದು ಬಿಗ್ಬಾಸ್ ಮನೆಗೆ ಪ್ರವೇಶಿಸಿದ್ದಾರೆ.
10. ಆಸಿಯಾ ಫಿರ್ದೋಸ್ : ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಮೂಲಕ ಜನಪ್ರಿಯರಾಗಿರುವ ಕಿರುತೆರೆ ನಟಿ ಆಸಿಯಾ ಫಿರ್ದೋಸ್ ಕೂಡ ಈ ಬಾರಿ ಬಿಗ್ಬಾಸ್ ಮನೆಯ ಆಟಕ್ಕೆ ಕಾಲಿಟ್ಟಿದ್ದಾರೆ.
11. ಲಿಖಿತ್ ಗೋಂದಿ : ‘ಬಿಗ್ಬಾಸ್ ಅಗ್ನಿಪರೀಕ್ಷೆ’ ಮೂಲಕ ಆಯ್ಕೆಯಾದ ಸ್ಪರ್ಧಿಗಳಲ್ಲಿ ಲಿಖಿತ್ ಗೋಂದಿ ಕೂಡ ಒಬ್ಬರು. ಇದೀಗ ಅವರು ಬಿಗ್ಬಾಸ್ ಮನೆಯೊಳಗೆ ತಮ್ಮ ಆಟ ಆರಂಭಿಸಿದ್ದಾರೆ.
12. ತಾಂಡವ್ ರಾಮ್ : ಕುಸ್ತಿ ಪಟುವಾಗಿರುವ ತಾಂಡವ್ ರಾಮ್ ‘ಜೋಡಿ ಹಕ್ಕಿ’ ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಪರಿಚಿತರಾಗಿದ್ದಾರೆ. ಇದೀಗ ಬಿಗ್ಬಾಸ್ ಮನೆಯಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಸಜ್ಜಾಗಿದ್ದಾರೆ.
13. ವೈಷ್ಣವಿ ಕೌಂಡಿನ್ಯ : ‘ಮಿಥುನ ರಾಶಿ’ ಹಾಗೂ ‘ಪ್ರೇಮ ಕಾವ್ಯ’ ಸೇರಿದಂತೆ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿರುವ ವೈಷ್ಣವಿ ಕೌಂಡಿನ್ಯ ಕಿರುತೆರೆ ಪ್ರೇಕ್ಷಕರಿಗೆ ಪರಿಚಿತ ಮುಖ. ಅವರು ಬಿಗ್ಬಾಸ್ ಕನ್ನಡ ಸೀಸನ್ 13ರ 13ನೇ ಸ್ಪರ್ಧಿಯಾಗಿ ಮನೆಗೆ ಪ್ರವೇಶಿಸಿದ್ದಾರೆ.
14. ಧನುಷ್ ಮಂಜುನಾಥ್ : ‘ಅಗ್ನಿಪರೀಕ್ಷೆ’ ಮೂಲಕ ಆಯ್ಕೆಯಾದ ಮತ್ತೊಬ್ಬ ಸ್ಪರ್ಧಿ ಧನುಷ್ ಮಂಜುನಾಥ್. ಇದೀಗ ಅವರು ಬಿಗ್ಬಾಸ್ ಮನೆಯ ಆಟದಲ್ಲಿ ತಮ್ಮದೇ ಛಾಪು ಮೂಡಿಸಲು ಸಜ್ಜಾಗಿದ್ದಾರೆ.
15. ಯಶಸ್ ಕೃಷ್ಣ : ‘ಪವಿತ್ರ ಬಂಧನ’ ಧಾರಾವಾಹಿಯ ‘ತಿಲಕ್ ದೇಶ್ಮುಖ್’ ಪಾತ್ರದ ಮೂಲಕ ಜನಪ್ರಿಯರಾಗಿರುವ ಯಶಸ್ ಕೃಷ್ಣ, ಬಿಗ್ಬಾಸ್ ಶೋಗೆ 15ನೇ ಸ್ಪರ್ಧಿಯಾಗಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ನಟನೆ ಹಾಗೂ ಹ್ಯಾಂಡ್ಸಮ್ ಲುಕ್ ಮೂಲಕ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ.
16. ಕವಿ ಮಂಜುನಾಥ್ : ‘ಅಗ್ನಿಪರೀಕ್ಷೆ’ಯ ಜ್ಯೂರಿ ಆಯ್ಕೆ ಮಾಡಿದ ಸ್ಪರ್ಧಿಯಾಗಿ ಮಾಡ್ರನ್ ಕವಿ ಮಂಜುನಾಥ್ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
16 ಸ್ಪರ್ಧಿಗಳು ಬಿಗ್ಬಾಸ್ ಮನೆಗೆ ಕಾಲಿಟ್ಟಿರುವ ಬೆನ್ನಲ್ಲೇ ಈ ಬಾರಿ ಯಾರು ತಮ್ಮ ಮಾತು ಹಾಗೂ ವ್ಯಕ್ತಿತ್ವದಿಂದ ಗಮನ ಸೆಳೆಯಲಿದ್ದಾರೆ ಎಂಬ ಕುತೂಹಲ ಮೂಡಿದೆ. ಟಾಸ್ಕ್ಗಳಲ್ಲಿ ಯಾರು ಮಿಂಚುತ್ತಾರೆ, ಯಾರು ಉತ್ತಮ ಸ್ನೇಹ ಬೆಳೆಸುತ್ತಾರೆ, ಯಾರ ನಡುವೆ ಕಿರಿಕ್ ಶುರುವಾಗಲಿದೆ ಹಾಗೂ ಎಲಿಮಿನೇಷನ್ ಹಂತದಲ್ಲಿ ಯಾರು ಹೊರಬೀಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.